ಧರ್ಮಸ್ಥಳ ಕೇಸ್‌ಗೆ ಬಿಗ್‌ ಟ್ವಿಸ್ಟ್‌: ಎಸ್ಐಟಿ ರಿಪೋರ್ಟ್‌ನಲ್ಲಿ ಸ್ಫೋಟಕ ಮಾಹಿತಿ ಬಟಾಬಯಲು

Untitled design 2025 12 10T123253.252

ಧರ್ಮಸ್ಥಳ, ಡಿಸೆಂಬರ್ 10: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಕುರಿತು ಮಾಸ್ಕ್​​ಮ್ಯಾನ್​​ ಚಿನ್ನಯ್ಯ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ದಳದ (SIT) ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಾಬೀತಾದಂತೆ ಈ ಪ್ರಕಣದಲ್ಲಿ, ಚಿನ್ನಯ್ಯ ಸೇರಿದಂತೆ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ.ಜಯಂತ್, ಸುಜಾತಾ ಭಟ್ ಒಟ್ಟು ಆರು ಮಂದಿ ಆರೋಪಿಗಳು ಈ ಅಪರಾಧ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಎಸ್ಐಟಿ ದೃಢಪಡಿಸಿದೆ.

ಪ್ರಮುಖ ಆರೋಪಿ (ಎ1) ಚಿನ್ನಯ್ಯ ಹಣದ ಆಮಿಷಕ್ಕೆ ಒಳಗಾಗಿ ಈ ‘ಬುರುಡೆ ಕಥೆ’ಯನ್ನು ಕಟ್ಟಿದ್ದ. ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳಿಕೆ ನೀಡಲು ಬುರುಡೆ ಗ್ಯಾಂಗ್ ಚಿನ್ನಯ್ಯನಿಗೆ ಹಣ ಕೊಟ್ಟು ಪುಸಲಾಯಿಸಿತ್ತು.ಧರ್ಮಸ್ಥಳದ ಆವರಣದಲ್ಲಿ ಅಪರಿಚಿತ ಶವಗಳನ್ನು ತಾನೇ ಹೂತಿದ್ದೇನೆ ಎಂದು ಚಿನ್ನಯ್ಯನಿಂದ ಸುಳ್ಳು ಹೇಳಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಚಿನ್ನಯ್ಯನಿಗೆ ಮೊದಲಿನಿಂದಲೂ ಪರಿಚಿತನಾಗಿದ್ದ ವಿಠ್ಠಲಗೌಡ ಆತನನ್ನು ಮಹೇಶ್ ತಿಮರೋಡಿ ಮನೆಗೆ ಕರೆದೊಯ್ದಿದ್ದ. ತಿಮರೋಡಿ ಮನೆಯಲ್ಲಿ ನಡೆದ ಸಭೆಯಲ್ಲಿ ಮಟ್ಟಣ್ಣನವರ್, ಜಯಂತ್ ಮತ್ತು ವಿಠ್ಠಲಗೌಡ ಸಹ ಇದ್ದರು. ಈ ಸಭೆಯಲ್ಲಿ ಧರ್ಮಸ್ಥಳದ ಮೇಲ್ವಿಚಾರಕರ ವಿರುದ್ಧ ಸುಳ್ಳು ಆರೋಪದ ಮೂಲಕ ಪಿತೂರಿ ನಡೆಸಲು ಸಂಚು ರೂಪಿಸಲಾಗಿತ್ತು. ಅದರಂತೆ, ತಲೆಬುರುಡೆಯೊಂದನ್ನು ಚಿನ್ನಯ್ಯನಿಗೆ ನೀಡಿ, ಅದನ್ನು ಸಾಕ್ಷಿಯಾಗಿ ಬಳಸಿ ಪೊಲೀಸರಿಗೆ ದೂರು ನೀಡುವಂತೆ ಪ್ರೇರೇಪಿಸಲಾಗಿತ್ತು. ಅಲ್ಲದೆ, ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸುವ ಪ್ರಯತ್ನವೂ ನಡೆದಿತ್ತು.

ಈ ಷಡ್ಯಂತ್ರದ ಮಧ್ಯೆಯೇ, ಮಹೇಶ್ ಶೆಟ್ಟಿ ತಿಮರೋಡಿ ಅವರು ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸ್ವಾಮೀಜಿ ಹೆಸರನ್ನು ಉಲ್ಲೇಖಿಸಿದ್ದರು. ತಿಮರೋಡಿ ಅವರು, ನಾನು ಮತ್ತು ಚಿನ್ನಯ್ಯ ಆ ಮಠಕ್ಕೆ ಹೋಗಿದ್ದು ಸತ್ಯ. ನಮ್ಮ ಜೊತೆಗೆ ಸೌಜನ್ಯಾ ಮನೆಯವರೂ ಬಂದಿದ್ದರು. ಆ ವೇಳೆ ಸ್ವಾಮೀಜಿ ಮುಂದೆ ಒಂದೂವರೆ ಗಂಟೆಗಳ ಕಾಲ ಚಿನ್ನಯ್ಯ ಎಲ್ಲವನ್ನೂ ಹೇಳಿದ್ದಾನೆ. ಯಾರೆಲ್ಲ ಅತ್ಯಾಚಾರ ಎಸಗಿದ್ದಾರೆ, ಈ ಕೃತ್ಯ ಮಾಡಿಸಿದ್ದಾರೆ ಎಂಬುದನ್ನು ಆತ ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದರು.

ಮತ್ತೊಂದೆಡೆ, ಈ ಪ್ರಕರಣದ ಪ್ರಮುಖ ಆರೋಪಿಯಾದ ಮಾಸ್ಕ್‌ಮ್ಯಾನ್ ಚಿನ್ನಯ್ಯನಿಗೆ ಕೋರ್ಟ್ ಜಾಮೀನು ನೀಡಿದ್ದರೂ, ಆತನ ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. ನವೆಂಬರ್ 26 ರಂದೇ ಚಿನ್ನಯ್ಯನಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಆಗಿತ್ತು. ಕೋರ್ಟ್ ಆದೇಶದಂತೆ, ಚಿನ್ನಯ್ಯನ ಬಿಡುಗಡೆಗಾಗಿ ಇಬ್ಬರು ಜಾಮೀನುದಾರರು ಮತ್ತು ₹1 ಲಕ್ಷ ಮೊತ್ತದ ಭದ್ರತೆ ಬಾಂಡ್ ನೀಡಬೇಕಾಗಿತ್ತು.ಆದರೆ, ಇಲ್ಲಿಯವರೆಗೂ ಯಾರೊಬ್ಬರೂ ಜಾಮೀನುದಾರರಾಗಿ ಅವನ ಸಾಕ್ಷಿಯಾಗಿ ಬರಲಿಲ್ಲ ಜೊತೆಗೆ ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆಯಲ್ಲಿ, ಚಿನ್ನಯ್ಯ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ ಇರುವಂತಾಗಿದೆ.

ಎಸ್ಐಟಿಯ ಈ ಪ್ರಾಥಮಿಕ ತನಿಖಾ ವರದಿಯಿಂದಾಗಿ ಧರ್ಮಸ್ಥಳದ ಸುತ್ತ ಎದ್ದಿದ್ದ ಗೊಂದಲ ಮತ್ತು ಅನುಮಾನಗಳಿಗೆ ಸದ್ಯಕ್ಕೆ ತೆರೆಬಿದ್ದಂತಾಗಿದ್ದು, ಈ ಷಡ್ಯಂತ್ರದ ಹಿಂದಿನ ಸಂಪೂರ್ಣ ಉದ್ದೇಶ ಮತ್ತು ಜಾಲದ ಕುರಿತು ಪೊಲೀಸರ ಮುಂದಿನ ತನಿಖೆಯು ಇನ್ನಷ್ಟು ಸತ್ಯಾಂಶಗಳನ್ನು ಹೊರತರಲಿದೆ.

Exit mobile version