ಸಿದ್ದರಾಮಯ್ಯ ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ಕೇರಳ ಲಿಂಕ್‌: ಕೃಪಾ ಆಳ್ವ ಸಂಪರ್ಕದಲ್ಲಿದ್ದ ವ್ಯಕ್ತಿಗೆ ನೋಟಿಸ್‌

Untitled design (13)

ಬೆಂಗಳೂರು, ನವೆಂಬರ್ 28: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್‌ ಆಪರೇಷನ್‌ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಬೆಂಗಳೂರು ಕೇಂದ್ರ ಸೈಬರ್‌ ಪೊಲೀಸರು ಇದೀಗ ಕೇರಳ ಮೂಲದ ವ್ಯಕ್ತಿಯೊಬ್ಬರ ಸಂಪರ್ಕದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಪ್ರಕರಣಕ್ಕೆ ನೆರೆರಾಜ್ಯದ ನಂಟು ಇರುವ ಸಾಧ್ಯತೆ ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ವೇಳೆ ಕೇರಳ ಮೂಲದ ವ್ಯಕ್ತಿಯೊಬ್ಬರು ಕೃಪಾ ಆಳ್ವ ಅವರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಆ ವ್ಯಕ್ತಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಎರಡು ಬಾರಿ ನೋಟಿಸ್‌ ನೀಡಿದ್ದಾರೆ. ಆದರೆ, ಎರಡೂ ಬಾರಿ ನೋಟಿಸ್‌ ನೀಡಿದರೂ ಆತ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. 

ಕೃಪಾ ಆಳ್ವ ಸಂಪರ್ಕದಲ್ಲಿದ್ದ ವ್ಯಕ್ತಿಯ ಬಗ್ಗೆ ತನಿಖೆ

ಮಹಿಳೆಯೊಬ್ಬರು ನಡೆಸಿದ್ದರೆನ್ನಲಾದ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಕೃಪಾ ಆಳ್ವ ಅವರ ಸಂಪರ್ಕದ ವಿಚಾರವೂ ತನಿಖೆಯ ಪ್ರಮುಖ ವಿಷಯವಾಗಿದ್ದು, ಸ್ಟಿಂಗ್‌ ಆಪರೇಷನ್‌ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆ ಕೃಪಾ ಆಳ್ವ ಅವರನ್ನು ಕೇರಳ ಮೂಲದ ವ್ಯಕ್ತಿಯೊಬ್ಬರ ಮೂಲಕ ಸಂಪರ್ಕಿಸಿದ್ದಳು ಎಂಬ ಮಾಹಿತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಈ ವ್ಯಕ್ತಿ ಈ ಹಿಂದೆ ಕೃಪಾ ಆಳ್ವ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕೃಪಾ ಆಳ್ವ ಅವರು ಮಕ್ಕಳ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕೇರಳ ಮೂಲದ ಈ ವ್ಯಕ್ತಿ ಅವರ ಕಚೇರಿಯಲ್ಲಿ ಭಾಷಾಂತರಕಾರನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿಂದಿನ ಪರಿಚಯದ ಹಿನ್ನೆಲೆ ಸ್ಟಿಂಗ್‌ ಆಪರೇಷನ್‌ನಲ್ಲಿದ್ದ ಮಹಿಳೆ ಕೃಪಾ ಆಳ್ವ ಅವರನ್ನು ಸಂಪರ್ಕಿಸಲು ಈ ವ್ಯಕ್ತಿಯ ನೆರವು ಪಡೆದಿದ್ದಳೇ ಎಂಬ ಅನುಮಾನ ವ್ಯಕ್ತವಾಗಿದೆ.

ಮಹಿಳೆಯನ್ನು ಕೃಪಾ ಆಳ್ವ ಬಳಿ ಕರೆತಂದಿದ್ದು ಯಾರು?

ಸ್ಟಿಂಗ್‌ ಆಪರೇಷನ್‌ನಲ್ಲಿ ಭಾಗಿಯಾಗಿದ್ದ ಮಹಿಳೆ ಮತ್ತು ಕೇರಳ ಮೂಲದ ವ್ಯಕ್ತಿಯ ನಡುವೆ ನಿಜವಾಗಿಯೂ ಸಂಪರ್ಕವಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಆ ಮಹಿಳೆಯನ್ನು ಕೃಪಾ ಆಳ್ವ ಅವರ ಬಳಿ ಕರೆತಂದಿದ್ದೇ ಇದೇ ವ್ಯಕ್ತಿಯೇ ಎಂಬ ಪ್ರಶ್ನೆ ಎದ್ದಿದ್ದು ತನಿಖೆ ಮುಂದುವರಿದಿದೆ.

ಮಹಿಳೆ ಮತ್ತು ಕೇರಳ ಮೂಲದ ವ್ಯಕ್ತಿಯ ನಡುವಿನ ಸಂಪರ್ಕದ ಸ್ವರೂಪ, ಕೃಪಾ ಆಳ್ವ ಅವರೊಂದಿಗಿನ ಆತನ ಹಿಂದಿನ ಪರಿಚಯ ಹಾಗೂ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಆತನ ಪಾತ್ರ ಏನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. 

ವಿಚಾರಣೆಗೆ ಹಾಜರಾಗದ ವ್ಯಕ್ತಿ: ಪೊಲೀಸರಿಂದ ಮುಂದಿನ ಕ್ರಮ

ಕೇರಳ ಮೂಲದ ವ್ಯಕ್ತಿಗೆ ಈಗಾಗಲೇ ಎರಡು ಬಾರಿ ನೋಟಿಸ್‌ ನೀಡಲಾಗಿದೆ. ಆದರೂ ಆತ ವಿಚಾರಣೆಗೆ ಹಾಜರಾಗದಿರುವುದು ಪೊಲೀಸರ ತನಿಖೆಗೆ ಸವಾಲಾಗಿದೆ. ನೋಟಿಸ್‌ ನೀಡಿದ ಬಳಿಕವೂ ವಿಚಾರಣೆಗೆ ಬಾರದಿರುವ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆಗೆ ಕರೆಸಿಕೊಳ್ಳಲು ಪೊಲೀಸರು ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಈ ಪ್ರಕರಣದಲ್ಲಿ ಕೇರಳ ಮೂಲದ ವ್ಯಕ್ತಿಯ ಪಾತ್ರ ಎಷ್ಟರ ಮಟ್ಟಿಗೆ ಇದೆ ಎಂಬುದು ಆತನ ವಿಚಾರಣೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ ಆತ ಕೃಪಾ ಆಳ್ವ ಅವರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಮತ್ತು ಮಹಿಳೆಯೊಂದಿಗೆ ಆತನ ಸಂಪರ್ಕದ ಸಾಧ್ಯತೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

 

Exit mobile version