ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ರಾಜ್ಯಸಭಾ ಆಫರ್ ನೀಡಿದ್ದ ರಾಹುಲ್ ಗಾಂಧಿ!

BeFunky collage (25)

ಕರ್ನಾಟಕ ರಾಜಕಾರಣದಲ್ಲಿ ಸಿಎಂ ಹುದ್ದೆ ಬದಲಾವಣೆಯ ಬೆನ್ನಲ್ಲೇ ಹೈಕಮಾಂಡ್ ಮಟ್ಟದ ಮತ್ತೊಂದು ರೋಚಕ ರಾಜಕೀಯ ರಹಸ್ಯ ಹೊರಬಿದ್ದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪತ್ನಿ ಪಾರ್ವತಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭಾ ಸ್ಥಾನದ ಆಫರ್ ಅನ್ನು ಸಿದ್ದರಾಮಯ್ಯ ಅವರು ಗೌರವಯುತವಾಗಿಯೇ ನಿರಾಕರಿಸಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ, ಸಚಿವ ಸಂಪುಟ ರಚನೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿಯ ಕುರಿತು ಹೈಕಮಾಂಡ್ ಜೊತೆ ಅಂತಿಮ ಚರ್ಚೆ ನಡೆಸಲು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಮತ್ತು ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಇಂದು (ಜೂನ್ 1) ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಮುಖ್ಯಾಂಶಗಳು :

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದೆಹಲಿ ರಾಜಕಾರಣದ ಆಫರ್ ನೀಡಿದ್ದ ರಾಹುಲ್ ಗಾಂಧಿ.

ಪತ್ನಿಯ ರಾಜ್ಯಸಭಾ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ ಸಿದ್ದರಾಮಯ್ಯ; ಹಿಂದುಳಿದ ನಾಯಕರಿಗೆ ನೀಡಲು ಮನವಿ.

ಜಾತಿ ಸಮೀಕರಣದ ಆಧಾರದ ಮೇಲೆ ರಾಜ್ಯದಲ್ಲಿ ಕನಿಷ್ಠ 3 ಡಿಸಿಎಂ ಹುದ್ದೆ ಸೃಷ್ಟಿಸಲು ಸಿದ್ದು ಬಣದ ತೀವ್ರ ಒತ್ತಡ.

ಸಂಭಾವ್ಯ ಸಚಿವರ ಪಟ್ಟಿ ಫೈನಲ್ ಮಾಡಲು ಇಂದು ದೆಹಲಿಗೆ ತೆರಳಿದ ಸಿದ್ದರಾಮಯ್ಯ – ಡಿಕೆಶಿ ಜೋಡಿ.

ರಾಹುಲ್ ಗಾಂಧಿ ಆಫರ್ ತಿರಸ್ಕರಿಸಿದ್ದೇಕೆ ಸಿದ್ದರಾಮಯ್ಯ?

ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಬರಬೇಕೆಂದು ರಾಹುಲ್ ಗಾಂಧಿ ತೀವ್ರ ಒತ್ತಡ ಹೇರಿದ್ದರು ಎನ್ನಲಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಬರಲು ಸಾಧ್ಯವಾಗದಿದ್ದರೆ, ಅವರ ಪತ್ನಿ ಪಾರ್ವತಿ ಅವರನ್ನು ರಾಜ್ಯಸಭೆಗೆ ಕಳುಹಿಸಿಕೊಡುವಂತೆ ಗೌರವಯುತ ಆಫರ್ ನೀಡಿದ್ದರು. ಆದರೆ, ಇದನ್ನು ನಿರಾಕರಿಸಿರುವ ಸಿದ್ದರಾಮಯ್ಯ, “ನಾನು ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ. ನನ್ನ ಪತ್ನಿ ಎಂದಿಗೂ ರಾಜಕೀಯದಲ್ಲಿ ಇಲ್ಲ, ಆಕೆ ಹೊರಜಗತ್ತಿಗೂ ಬಂದವಳಲ್ಲ. ಹೀಗಾಗಿ ಆಕೆ ರಾಜ್ಯಸಭೆ ಪ್ರವೇಶಿಸುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆ ಸ್ಥಾನವನ್ನು ಹಿಂದುಳಿದ ಸಮುದಾಯದ ಯೋಗ್ಯ ನಾಯಕರಿಗೆ ನೀಡುವಂತೆ ಕೋರಿದ್ದಾರೆ. ಇದೇ ವೇಳೆ ಪುತ್ರ ಯತೀಂದ್ರ ಅವರಿಗೆ ಡಿಸಿಎಂ ಪಟ್ಟ ನೀಡುವುದನ್ನೂ ಅವರು ನಿರಾಕರಿಸಿದ್ದಾರೆ.

ಮೂವರಿಗೆ ಡಿಸಿಎಂ ಪಟ್ಟ ನೀಡಲು ಸಿದ್ದು ಬಣದ ಬ್ಯಾಟಿಂಗ್!

ರಾಜ್ಯದಲ್ಲಿ ಜಾತಿ ಸಮೀಕರಣವನ್ನು ಸರಿದೂಗಿಸಲು ಕನಿಷ್ಠ ಮೂವರಿಗೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ವಾದಿಸಲಿದ್ದಾರೆ. ಪ್ರಮುಖವಾಗಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್, ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜಮೀರ್ ಅಹಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಲು ಸಿದ್ದು ಬಣ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು ನಡೆಸಿದೆ.

ದೆಹಲಿಯಲ್ಲಿ ಹೈಕಮಾಂಡ್ ಫಿಲ್ಟರ್: ಸಚಿವಾಕಾಂಕ್ಷಿಗಳಲ್ಲಿ ನಡುಕ

ಸಂಪುಟ ಸೇರಲು ಸಿದ್ದರಾಮಯ್ಯ ಬಣದಿಂದ ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ.ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಎಚ್.ಸಿ. ಮಹದೇವಪ್ಪ ಹಾಗೂ ಜಮೀರ್ ಅಹಮದ್ ಖಾನ್ ಪ್ರಮುಖ ರೇಸ್‌ನಲ್ಲಿದ್ದಾರೆ. ಈಗಾಗಲೇ ಹತ್ತಾರು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಜಿಲ್ಲಾವಾರು ಮತ್ತು ಸಮುದಾಯವಾರು ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಲಿಸ್ಟ್ ಫಿಲ್ಟರ್ ಮಾಡಲಿದೆ.

Exit mobile version