ಬಳ್ಳಾರಿ ಗುಂಪು ಘರ್ಷಣೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ; ಸಿಎಂ ಸಿದ್ದರಾಮಯ್ಯ

Untitled design 2026 01 02T161923.203

ಬೆಂಗಳೂರು, ಜನವರಿ 2: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪುಘರ್ಷಣೆ ಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.

ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪುಘರ್ಷಣೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರನ ಸಾವು ಸಂಭವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಕರಣದ ತನಿಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಘಟನೆಯಲ್ಲಿ ಬಳಸಲಾದ ಗನ್ ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಸತೀಶ್ ರೆಡ್ಡಿಯವರು ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ರಾಜಶೇಖರ ಅವರಿಗೆ ತಗುಲಿರಬಹುದು, ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದರು.

ಜನಾರ್ದನ ರೆಡ್ಡಿ ನಿವಾಸದ ಬಳಿ ಬ್ಯಾನರ್‌ ವಿಚಾರಕ್ಕೆ ಗಲಾಟೆ: ಓರ್ವ ಯುವಕ ಸಾ*ವು

ಬಳ್ಳಾರಿ: ವರ್ಷದ ಮೊದಲ ದಿನವೇ ಬಳ್ಳಾರಿಯಲ್ಲಿ ರಾಜಕೀಯ ವೈಷಮ್ಯದ ಕಿಚ್ಚು ಸ್ಫೋಟಗೊಂಡಿದೆ. ನಗರದ ಹವಂಬಾವಿ ಪ್ರದೇಶದಲ್ಲಿರುವ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಇಡೀ ಪ್ರದೇಶ ಉದ್ವಿಗ್ನಗೊಂಡಿದೆ.

ಜನವರಿ 3ರಂದು ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರು ನಗರದಾದ್ಯಂತ ಬ್ಯಾನರ್ ಅಳವಡಿಸುತ್ತಿದ್ದಾರೆ. ಇದರ ಭಾಗವಾಗಿ ಜನಾರ್ದನ ರೆಡ್ಡಿ ಅವರ ನಿವಾಸದ ಮುಂಭಾಗದಲ್ಲೂ ಬ್ಯಾನರ್ ಹಾಕಲು ಮುಂದಾದಾಗ ರೆಡ್ಡಿ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಣ್ಣ ಜಗಳ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಎರಡೂ ಬಣಗಳ ನೂರಾರು ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ಆರಂಭಿಸಿದರು.

ಘರ್ಷಣೆ ತೀವ್ರಗೊಂಡ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಜನಾರ್ದನ ರೆಡ್ಡಿ ಅವರ ಬೆಂಬಲಿಗರು ಮತ್ತು ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಗುಂಪಿನ ನಡುವೆ ಮಾರಾಮಾರಿಯಾಗಿದೆ. ಇದೇ ವೇಳೆ ನಡೆದ ಫೈರಿಂಗ್‌ನಲ್ಲಿ ಗುಂಡು ತಗುಲಿ ಓರ್ವ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ ಬೆಂಬಲಿಗರು ನನ್ನ ಹತ್ಯೆಗೆ ಸಂಚು ರೂಪಿಸಿ ಮನೆ ಮುಂದೆ ಗಲಾಟೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸರ ಮೇಲೆ ಕಲ್ಲು ತೂರಾಟ-ಲಾಠಿ ಚಾರ್ಜ್

ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೂ ಉದ್ರಿಕ್ತ ಗುಂಪುಗಳು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದ್ದಾರೆ. ಸ್ಥಳೀಯ ಹಲವಾರು ಮನೆಗಳ ಮೇಲೂ ಕಲ್ಲು ಬಿದ್ದಿದ್ದು, ಹವಂಬಾವಿ ಏರಿಯಾದಲ್ಲಿ ಜನರು ಭಯಭಿತರಾಗಿದ್ದಾರೆ.

ರೆಡ್ಡಿ-ರಾಮುಲು ಜೋಡಿ ಭೇಟಿ

ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಜನಾರ್ದನ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಇತ್ತೀಚೆಗಷ್ಟೇ ಸಂಡೂರು ಉಪಚುನಾವಣೆಯ ಬಳಿಕ ಮುನಿಸು ಮರೆತು ಒಂದಾಗಿದ್ದ ಈ ಇಬ್ಬರು ನಾಯಕರು ಈಗ ಒಟ್ಟಾಗಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಶ್ರೀರಾಮುಲು ಭೇಟಿಯಿಂದ ಸ್ಥಳದಲ್ಲಿ ರಾಜಕೀಯ ಕಾವು ಮತ್ತಷ್ಟು ಏರಿದೆ.

ಪ್ರಸ್ತುತ ಬಳ್ಳಾರಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಜನಾರ್ಧನ್‌ ರೆಡ್ಡಿ ನಿವಾಸದ ಬಳಿ ನಿಷೇಧಾಜ್ಞೆ ಜಾರಿಗೊಳಿಸುವ ಸಾಧ್ಯತೆಯಿದೆ.

Exit mobile version