ಸಿದ್ದರಾಮಯ್ಯ ನೇತೃತ್ವದಲ್ಲಿ ಯೋಧರಿಗೆ ಬೆಂಬಲ: ಇಂದು ಕಾಂಗ್ರೆಸ್‌ ತಿರಂಗಾ ಯಾತ್ರೆ

Web (95)

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ದುಷ್ಕೃತ್ಯಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಮೂಲಕ ದೇಶವನ್ನು ರಕ್ಷಿಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು ಕರ್ನಾಟಕ ಕಾಂಗ್ರೆಸ್ ಬೆಂಗಳೂರಿನಲ್ಲಿ ‘ತಿರಂಗಾ ಯಾತ್ರೆ’ಯನ್ನು ಆಯೋಜಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೇ 9, 2025ರಂದು ಬೆಳಗ್ಗೆ 9:30ಕ್ಕೆ ಈ ಬೃಹತ್ ಯಾತ್ರೆ ನಡೆಯಲಿದೆ. ಕೆ.ಆರ್. ವೃತ್ತದಿಂದ ಮಿನ್ಸ್ಕ್ ಸ್ಕ್ವೇರ್‌ವರೆಗೆ ನಡೆಯುವ ಈ ಯಾತ್ರೆಯು ದೇಶಪ್ರೇಮ ಮತ್ತು ಐಕ್ಯತೆಯ ಸಂದೇಶವನ್ನು ಸಾರಲಿದೆ.

ಕರ್ನಾಟಕ ಕಾಂಗ್ರೆಸ್ ಆಯೋಜಿಸಿರುವ ತಿರಂಗಾ ಯಾತ್ರೆಯು ಶುಕ್ರವಾರ ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಕೆ.ಆರ್. ವೃತ್ತದಿಂದ ಆರಂಭವಾಗಿ, ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿಯ ಮಿನ್ಸ್ಕ್ ಸ್ಕ್ವೇರ್‌ವರೆಗೆ ಮುಂದುವರಿಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯಾತ್ರೆಗೆ ನೇತೃತ್ವ ವಹಿಸಲಿದ್ದಾರೆ. ರಾಜ್ಯ ಸರ್ಕಾರದ ಎಲ್ಲ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇತರ ಮುಂಚೂಣಿ ಘಟಕಗಳ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ ಪಕ್ಷ ಸೂಚನೆ ನೀಡಿದೆ.

‘ದೇಶಪ್ರೇಮ ಮೆರೆಯೋಣ, ಐಕ್ಯತೆ ಸಾರೋಣ’ ಎಂಬ ಘೋಷವಾಕ್ಯದಡಿ ಈ ಯಾತ್ರೆಯಲ್ಲಿ ಸಾರ್ವಜನಿಕರೂ ಭಾಗವಹಿಸಲು ಕಾಂಗ್ರೆಸ್ ಕರೆ ನೀಡಿದೆ. ಸರ್ಕಾರಿ ಮತ್ತು ಖಾಸಗಿ ನೌಕರರು, ಚಲನಚಿತ್ರ ರಂಗದವರು, ಸಾಹಿತಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಸಂಘ ಸಂಸ್ಥೆಗಳು ಮತ್ತು ಪಕ್ಷ ಭೇದ ಮರೆತು ಎಲ್ಲರೂ ಈ ಯಾತ್ರೆಯಲ್ಲಿ ಭಾಗಿಯಾಗಬೇಕು ಎಂದು ಕೋರಲಾಗಿದೆ. ಯಾತ್ರೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಭಾರತದ ರಾಷ್ಟ್ರಧ್ವಜವನ್ನು ಮಾತ್ರ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ, “ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಒಗಟ್ಟಿನ ಬೆಂಬಲ ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಪಹಲ್ಗಾಮ್‌‌‌‌‌‌ನಲ್ಲಿ ಉಗ್ರರು 26 ಅಮಾಯಕರನ್ನು ಕೊಂದ ಘಟನೆಯಿಂದ ಆಕ್ರೋಶಗೊಂಡ ಭಾರತೀಯ ಸೇನೆ ದೇಶದ ಗಡಿಯನ್ನು ರಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ಎಲ್ಲರೂ ಈ ಯಾತ್ರೆಯಲ್ಲಿ ಭಾಗವಹಿಸಿ ಯೋಧರಿಗೆ ಬೆಂಬಲ ಸೂಚಿಸಬೇಕು,” ಎಂದು ಕರೆ ನೀಡಿದ್ದಾರೆ.

ತಿರಂಗಾ ಯಾತ್ರೆಯ ರೂಪುರೇಷೆ
  • ನೇತೃತ್ವ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ಸ್ಥಳ: ಕೆ.ಆರ್. ವೃತ್ತದಿಂದ ಮಿನ್ಸ್ಕ್ ಸ್ಕ್ವೇರ್‌ವರೆಗೆ, ಬೆಂಗಳೂರು
  • ಸಮಯ: ಮೇ 9, 2025, ಬೆಳಗ್ಗೆ 9:30
  • ಭಾಗವಹಿಸುವವರು: ಸಚಿವರು, ಶಾಸಕರು, ಕಾಂಗ್ರೆಸ್ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು
  • ಸೂಚನೆ: ಕೇವಲ ರಾಷ್ಟ್ರಧ್ವಜ ಪ್ರದರ್ಶನ, ಕಡ್ಡಾಯ ಹಾಜರಾತಿ
Exit mobile version