ಬೆಂಗಳೂರು: ಬಿಹಾರ ಚುನಾವಣೆ ಫಲಿತಾಂಶ ಹಾಗೂ ನವೆಂಬರ ಕ್ರಾಂತಿಯ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ಚೌಕಟ್ಟಿನಲ್ಲಿ ಮಹತ್ವದ ಬದಲಾವಣೆಗಳಿಗೆ ಸಿದ್ಧರಾಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ (ಅ.13) ಸಂಜೆ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟ ಆಯೋಜಿಸಿದ್ದಾರೆ.
ಇತ್ತೀಚೆಗೇ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಇದೇ ರೀತಿಯ ಭೋಜನಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಸಚಿವರು ಮತ್ತು ಶಾಸಕರು ಪಾಲ್ಗೊಂಡಿದ್ದರು . ಸಚಿವರನ್ನು ಒಂದುಗೂಡಿಸಿ, ಅವರೊಂದಿಗೆ ಸಮಾಲೋಚನೆ ನಡೆಸುವ ಪ್ರಕ್ರಿಯೆಯ ಭಾಗವಾಗಿ ಈ ಔತಣಕೂಟವನ್ನು ಏರ್ಪಡಿಸಿರಬಹುದು..
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ನ ನಾಯಕರು ಮತ್ತು ಸಚಿವರು ಹೇಗೆ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂಬ ಬಗ್ಗೆಯೂ ಈ ಸಮಾವೇಶದಲ್ಲಿ ಪ್ರಾಥಮಿಕ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ಆಳ್ವಿಕೆಗೆ ಈ ಚುನಾವಣೆಯ ಪ್ರಾಮುಖ್ಯತೆ ಇರುವುದರಿಂದ, ಚುನಾವಣಾ ಕಾರ್ಯತಂತ್ರ ಮತ್ತು ನೇತೃತ್ವದ ಪಾತ್ರವನ್ನು ಇಲ್ಲಿ ಸ್ಪಷ್ಟಪಡಿಸಲಾಗಬಹುದು.
ನವೆಂಬರ ಕ್ರಾಂತಿಯ ಸದ್ದು ಕೇಳಿಬರುವ ನಡುವೆ ಈ ಔತಣಕೂಟ ಆಯೋಜಿತವಾಗಿದ್ದು, ರಾಜಕೀಯ ವಲಯಗಳಲ್ಲಿ ಕುತೂಹಲವನ್ನು ಉಂಟುಮಾಡಿದೆ. ಸಂಪುಟದಿಂದ ಕೆಲವರನ್ನು ಬದಲಾಯಿಸಿ, ಹೊಸ ರೂಪುರೇಖೆ ನೀಡುವ ಸಲುವಾಗಿ ಈ ಸಭೆಯಲ್ಲಿ ಮಂಡನೆ ಮಾಡಲಾಗುವುದು ಎಂಬ ಊಹಿಸಲಾಗಿದೆ.