ಪಂಚರಾಜ್ಯ ಮತ್ತು ಉಪಚುನಾವಣೆ ಫಲಿತಾಂಶ ಹೊರಬಿದ್ದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಮೇ 6 ಅಥವಾ 7ರಂದು ಅವರು ದೆಹಲಿ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ಪುನಾರಚನೆಗೆ ಅನುಮತಿ ಕೋರಿ ಕಾಂಗ್ರೆಸ್ ವರಿಷ್ಠರನ್ನು ಮನವೊಲಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಕೆಲವು ಆಪ್ತ ಸಚಿವರೂ ಸಿಎಂಗೆ ಸಾಥ್ ನೀಡಲಿದ್ದಾರೆ.
ಏಕೆ ಈ ದೆಹಲಿ ಪ್ರಯಾಣ?
- ಸರ್ಕಾರ ರಚನೆಯಾಗಿ 3 ವರ್ಷಗಳು ತುಂಬುತ್ತಿರುವುದರಿಂದ ಸಂಪುಟ ಪುನಾರಚನೆಗೆ ಅವಕಾಶ ಕೋರಲಾಗುತ್ತಿದೆ.
- ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ.
- ಎದುರಾಳಿ ಬಣಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಉದ್ದೇಶವೂ ಇದೆ.
ಸಿಎಂ ಸಿದ್ದರಾಮಯ್ಯ ಅವರು ಆಪ್ತ ಸಚಿವರೊಂದಿಗೆ ರಹಸ್ಯ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
25ಕ್ಕೂ ಹೆಚ್ಚು ಶಾಸಕರು ದೆಹಲಿಗೆ
ಉಪಚುನಾವಣೆ ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್‌ನಲ್ಲಿ ತೀವ್ರ ಚಟುವಟಿಕೆ ಕಂಡುಬಂದಿದೆ. ಸುಮಾರು 25ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಮತ್ತು ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಈ ತಂಡ ಹೋಗಲಿದೆ.
ಹಿರಿಯ ಶಾಸಕರು ಮುಖ್ಯಮಂತ್ರಿ ಬಣಕ್ಕೆ ಸೇರಿದವರೇ ಆಗಿದ್ದು, ಈ ಬಾರಿ ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆಗೆ ಒತ್ತಾಯಿಸಲಿದ್ದಾರೆ.
ಕಳೆದ ಬಾರಿ ದೆಹಲಿ ಭೇಟಿ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಶತಾಯಗತಾಯ ರಾಹುಲ್ ಅವರನ್ನು ಭೇಟಿ ಮಾಡುವ ಯತ್ನ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಈಚೆಗೆ ನಾಯಕತ್ವ ವಿಚಾರದಲ್ಲಿ ನೀಡಿದ ಹೇಳಿಕೆಯೂ ಈ ಭೇಟಿಗೆ ಹೆಚ್ಚು ಮಹತ್ವ ನೀಡಿದೆ.
