ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ರಾಜ್ಯದಲ್ಲಿ ಅತ್ಯಂತ ಸುದೀರ್ಘ ಅವಧಿ ಮುಖ್ಯಮಂತ್ರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಾಯಕನಾಗಿ ಸಿದ್ದರಾಮಯ್ಯ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ.
ದೇವರಾಜ ಅರಸು ಅವರು 7 ವರ್ಷ 7 ತಿಂಗಳು 20 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಸಿದ್ದರಾಮಯ್ಯ ಅವರು ಆ ದಾಖಲೆಯನ್ನು ಮೀರಿ, ರಾಜ್ಯ ರಾಜಕೀಯ ಇತಿಹಾಸದಲ್ಲಿ ಅತಿ ದೀರ್ಘಾವಧಿ ಆಡಳಿತ ನಡೆಸಿದ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ.
2013ರ ಮೇ 13ರಂದು ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಸಿದ್ದರಾಮಯ್ಯ ಅವರು, 2018ರ ಮೇ 17ರವರೆಗೆ ಮೊದಲ ಅವಧಿಯಲ್ಲಿ ಆಡಳಿತ ನಡೆಸಿದ್ದರು. ಬಳಿಕ 2023ರ ಮೇ 20ರಂದು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ಮುಂದುವರೆಸಿದ್ದಾರೆ. ಎರಡನೇ ಅವಧಿಯಲ್ಲಿಯೇ ಈಗಾಗಲೇ 963 ದಿನಗಳನ್ನು ಪೂರೈಸಿದ್ದು, ಒಟ್ಟು ಅವಧಿಯಲ್ಲಿ ದೇವರಾಜ ಅರಸು ಅವರ ದಾಖಲೆಯನ್ನು ಮೀರಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಈ ಅಪರೂಪದ ಸಾಧನೆಗೆ ಅಭಿಮಾನಿಗಳು ಭಾರೀ ಉತ್ಸಾಹ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ಸಂಭ್ರಮಾಚರಣೆಗಳಿಗೆ ಸಜ್ಜಾಗಿದ್ದಾರೆ. ಅದರಲ್ಲೂ ನೆಲಮಂಗಲ ತಾಲೂಕಿನ ಭಕ್ತನಪಾಳ್ಯದಲ್ಲಿ ಆಯೋಜಿಸಿರುವ ವಿಶಿಷ್ಟ ಕಾರ್ಯಕ್ರಮ ರಾಜ್ಯದ ಗಮನ ಸೆಳೆದಿದೆ. “ಸುದೀರ್ಘ ಸಿಎಂ ಸಾಧನೆಗೆ ಜನವರಿ 6 ಕೋಳಿ ಸಾರು” ಎಂಬ ಸಂದೇಶದೊಂದಿಗೆ ಅಹಿಂದ ಕೂಟ ಹಾಗೂ ಸಿಎಂ ಅಭಿಮಾನಿಗಳು ಬೃಹತ್ ನಾಟಿಕೋಳಿ ಔತಣಕೂಟವನ್ನು ಆಯೋಜಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರದಿಂದ 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಎರಡು ಸಾವಿರ ಕೆಜಿ ನಾಟಿಕೋಳಿ ಸಾರು, ಅಪಾರ ಪ್ರಮಾಣದ ಅಡುಗೆ ಸಾಮಗ್ರಿಗಳು ಹಾಗೂ ಸಾಂಪ್ರದಾಯಿಕ ಶೈಲಿಯ ಆಹಾರ ಸಿದ್ಧಪಡಿಸಲಾಗುತ್ತಿದೆ.
ಅಭಿಮಾನಿಗಳು “ನಮ್ಮ ಆಹಾರ.. ನಮ್ಮ ಹಕ್ಕು.. ನಮ್ಮ ಸಂಸ್ಕೃತಿ.. ನಮ್ಮ ಹೆಮ್ಮೆ..” ಎಂಬ ಘೋಷಣೆಯೊಂದಿಗೆ ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ರಾಜಕೀಯ ದಾಖಲೆ ನಿರ್ಮಿಸಿದ ನಾಯಕನ ಸಾಧನೆಯನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ರೀತಿಯ ವಿಶಿಷ್ಟ ಆಚರಣೆ ಆಯೋಜಿಸಲಾಗಿದೆ.
