ಶಿವಮೊಗ್ಗ: ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಹಣ ದೋಚಿ ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿ, ಅರೆಬೆತ್ತಲೆಗೊಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹೊಂಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಾಗರ ತಾಲೂಕಿನ ಕಾನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಂಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಬ್ಬಳ್ಳಿ ಹುಚ್ಚಪ್ಪ ಎಂಬ ರೈತನ ಮನೆಗೆ ಮಧ್ಯಾಹ್ನದ ವೇಳೆಯಲ್ಲಿ ಕಳ್ಳ ನುಗ್ಗಿದ್ದಾನೆ ಎನ್ನಲಾಗಿದೆ. ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಮುರಿದು ಒಳಗೆ ಪ್ರವೇಶಿಸಿದ ಆತ, ಮನೆಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿ ನಗದು ಹಣ ಮತ್ತು ಕೆಲವು ಚಿನ್ನಾಭರಣಗಳನ್ನು ಕದ್ದಿದ್ದಾನೆ. ಈ ಹಣವನ್ನು ರೈತನು ಬೆಲ್ಲ ಮಾರಾಟದಿಂದ ಸಂಗ್ರಹಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಕಳ್ಳತನ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರಿಗೆ ಅನುಮಾನ ಬಂದಿದೆ. ಕೆಲವೇ ಕ್ಷಣಗಳಲ್ಲಿ ಕಳ್ಳನನ್ನು ಹಿಡಿದು ಸೆರೆ ಹಿಡಿದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಜನರು ಆತನ ಮೇಲೆ ಆಕ್ರೋಶ ಹೊರಹಾಕಿದ್ದು, ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆಂದು ತಿಳಿದುಬಂದಿದೆ.
ಘಟನೆಯ ನಂತರ ಗ್ರಾಮಸ್ಥರು ಕಳ್ಳನನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ, ಬಳಿಕ ಟ್ರಕ್‌ನಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ಒಪ್ಪಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೂ ಆತನಿಗೆ ಹೊಡೆದಿರುವುದಾಗಿ ತಿಳಿದುಬಂದಿದೆ. ಆದರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಕಳ್ಳತನ ನಡೆದ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿ, ಇನ್ನಿತರ ಸಹಚರರಿದ್ದಾರೆಯೇ ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
