ತವರು ಮನೆ ಸೇರಿದ್ದ ಹೆಂಡ್ತಿ..ಬಾವನಿಂದಲೇ ಬಾಮೈದರ ಮೇಲೆ ಡೆಡ್ಲಿ ಅಟ್ಯಾಕ್‌‌!

Untitled design 2025 10 05t200452.436

ಶಿವಮೊಗ್ಗ, ಅಕ್ಟೋಬರ್ 05: ಹೆಣ್ಣು ಕೊಟ್ಟು ಮದುವೆ ಮಾಡಿಸಿದ ಅಣ್ಣಂದಿರು, ತನ್ನ ತಂಗಿಯನ್ನು ಮದುವೆಯಾಗಿ ಸಂಸಾರ ಮಾಡದೆ ವಾಪಸ್ ಕಳಿಸಿದ್ದೀಯ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ತಂಗಿಯ ಗಂಡ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಹೆಂಡತಿಯ ಇಬ್ಬರೂ ಸಹೋದರರಿಗೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಇಬ್ಬರು ಸಹೋದರರಾದ ಶಬ್ಬೀರ್ ಮತ್ತು ಶಹಬಾಜ್‌ಗೆ ತಂಗಿಯ ಗಂಡನೇ ಚಾಕು ಇರಿದಿದ್ದಾನೆ. ಈ ಘಟನೆಯಲ್ಲಿ ಶಬ್ಬೀರ್‌ಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಆತನ ಸ್ಥಿತಿ ಚಿಂತಾಜನಕವಾಗಿದೆ. ಶಹಬಾಜ್ ಕೂಡ ಗಾಯಗೊಂಡಿದ್ದು, ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಕಾರಣವಾದ ಆರೋಪಿಗಳಾದ ಫರ್ದಿನ್, ಇದ್ರಿಶ್, ಮತ್ತು ಉಸ್ಮಾನ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಘಟನೆಯ ಹಿನ್ನೆಲೆ

2022ರಲ್ಲಿ ಶಬ್ಬೀರ್ ಮತ್ತು ಶಹಬಾಜ್‌ ಅವರ ತಂಗಿ ಸಲ್ಮೀಯಾಳನ್ನು ಫರ್ದಿನ್ ಪ್ರೀತಿಸಿ ಮದುವೆಯಾಗಿದ್ದ. ಆದರೆ, ಈ ವಿವಾಹಕ್ಕೆ ಸಹೋದರರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಮದುವೆಯಾದ ಒಂದು ವರ್ಷದೊಳಗೆ ಫರ್ದಿನ್ ತನ್ನ ಪತ್ನಿಯನ್ನು ತೊರೆದಿದ್ದ. ಇದರಿಂದ ಕೋಪಗೊಂಡ ಶಬ್ಬೀರ್ ಮತ್ತು ಶಹಬಾಜ್ ಆಗಾಗ್ಗೆ ಫರ್ದಿನ್‌ಗೆ ಕೊಲೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಈ ಬೆದರಿಕೆಗಳಿಂದ ಬೇಸತ್ತ ಫರ್ದಿನ್, ತನ್ನ ಸ್ನೇಹಿತರಾದ ಇದ್ರಿಶ್ ಮತ್ತು ಉಸ್ಮಾನ್‌ ಜೊತೆಗೂಡಿ, ಸೂಳೇ ಬೈಲು ಸರ್ಕಲ್‌ನಲ್ಲಿ ಶಬ್ಬೀರ್ ಮತ್ತು ಶಹಬಾಜ್‌ರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ದಾಳಿಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ತುಂಗಾ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಈ ದಾಳಿಗೆ ಕೌಟುಂಬಿಕ ದ್ವೇಷವೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳು ಘಟನೆಯ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದು, ದಾಳಿಯ ನಿಖರ ಕಾರಣಗಳು ಮತ್ತು ಇತರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

Exit mobile version