ನೀರಾನೆ ದಾಳಿಯಿಂದ ಪಶುವೈದ್ಯೆ ಸಾ*ವು: ಸಚಿವ ಈಶ್ವರ ಖಂಡ್ರೆ ಸಂತಾಪ

ಬೆಂಗಳೂರು, ಮಾ.20: ಶಿವಮೊಗ್ಗ ಜಿಲ್ಲೆಯ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದೆ. ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ಯುವ ಪಶುವೈದ್ಯೆಯೊಬ್ಬರು ನೀರಾನೆ (Hippopotamus) ದಾಳಿಯಿಂದ ಮೃತಪಟ್ಟಿದ್ದಾರೆ.

ಘಟನೆಯ ವಿವರ

ಮೃತ ದುರ್ದೈವಿ ಡಾ. ಸಮೀಕ್ಷಾ ರೆಡ್ಡಿ (27) , ಬೆಂಗಳೂರು ಮೂಲದವರಾಗಿದ್ದು, ಇತ್ತೀಚೆಗಷ್ಟೇ ಗುತ್ತಿಗೆ ಆಧಾರದಲ್ಲಿ ಪಶುವೈದ್ಯೆಯಾಗಿ ನೇಮಕಗೊಂಡಿದ್ದರು. ಗುರುವಾರ ರಾತ್ರಿ 10.30 ರ ಸುಮಾರಿಗೆ ಮೃಗಾಲಯದ ಆಸ್ಪತ್ರೆಗೆ ಸನ್ ಕಾನರ್ ಹಕ್ಕಿಯ ಚಿಕಿತ್ಸೆಗೆಂದು ತೆರಳಿದ್ದ ಡಾ.ಸಮೀಕ್ಷಾ, ಅದೇ ಸಂದರ್ಭದಲ್ಲಿ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ (Thermal Camera) ಮೂಲಕ ಪರೀಕ್ಷಿಸಲು ಅದರ ಆವರಣದ ಒಳಗೆ ಹೋಗಿದ್ದರು. ಈ ವೇಳೆ ನೀರಾನೆ ಏಕಾಏಕಿ ಹಠಾತ್ ದಾಳಿ ನಡೆಸಿತು.

ರಾತ್ರಿ 11.45 ರ ಸುಮಾರಿಗೆ ನಡೆದ ಈ ದಾಳಿಯಲ್ಲಿ ಡಾ. ಸಮೀಕ್ಷಾ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತುರ್ತಾಗಿ ಶಸ್ತ್ರಚಿಕಿತ್ಸೆಯನ್ನೂ (Surgery) ವೈದ್ಯರು ನಡೆಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಪಶುವೈದ್ಯೆ ಇಂದು (ಮಾರ್ಚ್ 20) ಬೆಳಿಗ್ಗೆ 6:30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಸಚಿವ ಈಶ್ವರ ಖಂಡ್ರೆ ಸಂತಾಪ

ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ಪಶುವೈದ್ಯೆ ನೀರಾನೆ(Hippopotamus) ದಾಳಿಯಿಂದ ಮೃತಪಟ್ಟಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ ಎಂದು ಶೋಕ ವ್ಯಕ್ತಪಡಿಸಿರುವ ಅವರು, ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಮೃತ ಯುವ ವೈದ್ಯೆಯ ಕುಟುಂಬದವರಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡುವಂತೆ ಸೂಚಿಸಿರುವ ಅವರು, ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವಾಗ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಪಾಲಿಸಬೇಕು ಎಂದೂ ಸ್ಪಷ್ಟ ಸೂಚನೆ ನೀಡಿದ್ದಾರೆ.

ಈ ದುರಂತದ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದಿಂದ ತನಿಖೆ ಮಾಡಿಸಿ, 7 ದಿನಗಳ ಒಳಗಾಗಿ ವರದಿ ನೀಡುವಂತೆಯೂ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಡಾ ಸಮೀಕ್ಷಾ ರೆಡ್ಡಿ ಅವರು ನಿನ್ನೆ ರಾತ್ರಿ 11.30ರ ಸಮಯದಲ್ಲಿ ವನ್ಯಜೀವಿಯೊಂದಕ್ಕೆ ಚಿಕಿತ್ಸೆ ನೀಡಲು ತೆರಳಿದ್ದಾಗ, ನೀರಾನೆ ದಾಳಿಯಿಂದ ಗಾಯಗೊಂಡಿದ್ದರು. ಅವರನ್ನು ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.

Exit mobile version