ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಯಕ್ಕುಂದ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಆಘಾತಕಾರಿ ಕೊಲೆ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪವಿದೆ. ಈ ದಾರುಣ ಘಟನೆಯು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವಾಗಿ ದಾಖಲಾಗಿದ್ದು, ಪೊಲೀಸರು ಆರೋಪಿ ಸೂರ್ಯ ಮತ್ತು ಆತನ ತಂದೆ ಸ್ವಾಮಿಯನ್ನು ಬಂಧಿಸಿದ್ದಾರೆ.
ಘಟನೆಯ ವಿವರ
ಸೂರ್ಯ ಮತ್ತು ಸ್ವಾತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಸ್ವಾತಿ ಪದವಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಸೂರ್ಯ, ಸ್ವಾತಿಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದನಾದರೂ, ಸ್ವಾತಿಯ ಕುಟುಂಬಸ್ಥರು ಆಕೆಯ ಓದು ಮುಗಿಯುವವರೆಗೆ ಮದುವೆಗೆ ಅವಕಾಶ ನೀಡಲಿಲ್ಲ. ಈ ವಿಷಯವಾಗಿ ಸೆಪ್ಟೆಂಬರ್ 21 ರಂದು ಇಬ್ಬರ ನಡುವೆ ಜಗಳವೂ ನಡೆದಿತ್ತು. ಅಂದು ಸೂರ್ಯ, ಸ್ವಾತಿಯನ್ನು ತನ್ನ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು, ಆಕೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಲೆಯ ನಂತರ, ಸೂರ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸೆಪ್ಟೆಂಬರ್ 23 ರಂದು ಸ್ವಾತಿಯ ಕುಟುಂಬಸ್ಥರು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ದೂರು ದಾಖಲಿಸಿದರು. ಸ್ವಾಮಿಯ ಮೇಲೆ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪವಿದೆ. ಮಂಗಳವಾರ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಶವ ಪತ್ತೆಯಾಯಿತು. ಪೊಲೀಸರು ಈಗಾಗಲೇ ಆರೋಪಿಗಳಾದ ಸೂರ್ಯ (ಎ1) ಮತ್ತು ಸ್ವಾಮಿ (ಎ2) ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ತೀವ್ರಗೊಂಡಿದ್ದು ಈ ಘಟನೆಯ ಸಂಪೂರ್ಣ ವಿವರಗಳು ಮತ್ತಷ್ಟು ಬಹಿರಂಗವಾಘಬೇಕಿದೆ.