ಬೆಂಗಳೂರು, ಜುಲೈ 16: ರಾಜ್ಯದಲ್ಲಿ ಮಳೆಯ ಕೊರತೆ ಮುಂದುವರೆದಿದೆ. ಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಮಳೆ ಕೊರತೆಯ ಹಿನ್ನೆಲೆಯಲ್ಲಿ ನೀರು ಮತ್ತು ವಿದ್ಯುತ್ ಬಳಕೆಯಲ್ಲಿ ಮಿತವ್ಯಯ ಪಾಲಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಸರ್ಕಾರಿ ಕಚೇರಿಗಳಿಗೆ ನೀರು-ವಿದ್ಯುತ್ ಉಳಿತಾಯದ ಹೊಸ ಮಾರ್ಗಸೂಚಿ
ವಿಧಾನಸೌಧ, ವಿಕಾಸಸೌಧ ಸೇರಿ ಎಲ್ಲಾ ಸಚಿವಾಲಯದ ಕಚೇರಿಗಳಿಗೆ ಆದೇಶ.
ಸಂಜೆ 6 ಗಂಟೆಯ ಬಳಿಕ ಅನಗತ್ಯ ವಿದ್ಯುತ್ ಬಳಕೆ ಪರಿಶೀಲನೆ ಕಡ್ಡಾಯ
ವಿಧಾನಸೌಧ, ವಿಕಾಸಸೌಧ ಹಾಗೂ ಸಚಿವಾಲಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಅಪವ್ಯಯ ತಡೆಗಟ್ಟಲು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಜಲಾಶಯಗಳಿಗೆ ಸಮರ್ಪಕ ಒಳಹರಿವು ದೊರೆಯದ ಕಾರಣ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿಯೂ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ, ಕಚೇರಿಗಳಲ್ಲಿ ಸಾಧ್ಯವಾದಷ್ಟು ನೈಸರ್ಗಿಕ ಬೆಳಕನ್ನೇ ಬಳಸಬೇಕು. ಅಗತ್ಯವಿದ್ದಾಗ ಮಾತ್ರ ವಿದ್ಯುತ್ ದೀಪ ಹಾಗೂ ಫ್ಯಾನ್‌ಗಳನ್ನು ಬಳಸುವಂತೆ ಸೂಚಿಸಲಾಗಿದೆ. ಕಚೇರಿ ಸಮಯ ಮುಗಿದ ಬಳಿಕ ಅನಗತ್ಯವಾಗಿ ದೀಪ, ಫ್ಯಾನ್, ಕಂಪ್ಯೂಟರ್ ಹಾಗೂ ಏರ್‌ಕಂಡೀಷನರ್‌ಗಳು ಚಾಲನೆಯಲ್ಲಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಮುಂದೆ ಸಂಜೆ 6 ಗಂಟೆಯ ಬಳಿಕ ಪ್ರತಿ ಮಹಡಿಯ ಭದ್ರತಾ ಸಿಬ್ಬಂದಿ ಮತ್ತು ಕಾವಲುಗಾರರು ಅನಗತ್ಯ ವಿದ್ಯುತ್ ದೀಪಗಳು ಹಾಗೂ ಇತರೆ ವಿದ್ಯುತ್ ಉಪಕರಣಗಳು ಆಫ್ ಆಗಿರುವುದನ್ನು ಪರಿಶೀಲಿಸಬೇಕು. ಸಚಿವರು ಹಾಗೂ ಅಧಿಕಾರಿಗಳು ತಮ್ಮ ಕೊಠಡಿಯನ್ನು ತೊರೆಯುವಾಗ ಎಲ್ಲಾ ವಿದ್ಯುತ್ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಈ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಹಾಗೂ ಭದ್ರತಾ ಸಿಬ್ಬಂದಿಯ ಮೇಲೂ ಇರಲಿದೆ.
ಇದಲ್ಲದೆ, ಸರ್ಕಾರಿ ಕಚೇರಿಗಳಲ್ಲಿರುವ ಏರ್‌ಕಂಡೀಷನರ್‌ಗಳನ್ನು 24ರಿಂದ 26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೇ ಬಳಸುವಂತೆ ಸೂಚಿಸಲಾಗಿದೆ. ವಿದ್ಯುತ್ ಉಳಿತಾಯಕ್ಕಾಗಿ ಸಾಂಪ್ರದಾಯಿಕ ಬಲ್ಬ್‌ಗಳ ಬದಲಿಗೆ ಎಲ್‌ಇಡಿ ದೀಪಗಳು ಹಾಗೂ ಕಾರಿಡಾರ್, ಸಭಾಂಗಣ ಮತ್ತು ವಿಶ್ರಾಂತಿ ಕೊಠಡಿಗಳಲ್ಲಿ ಮೋಷನ್ ಸೆನ್ಸರ್‌ಗಳನ್ನು ಅಳವಡಿಸಲು ನಿರ್ದೇಶಿಸಲಾಗಿದೆ.
ನೀರಿನ ಸಂರಕ್ಷಣೆಗೆ ಶೌಚಾಲಯ ಹಾಗೂ ಕಚೇರಿಗಳಲ್ಲಿನ ನಲ್ಲಿಗಳನ್ನು ಬಳಕೆಯ ನಂತರ ಕಡ್ಡಾಯವಾಗಿ ಬಂದ್ ಮಾಡಬೇಕು. ಸೋರಿಕೆ ಕಂಡುಬಂದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕು. ಜೊತೆಗೆ ನೀರಿನ ಬಳಕೆಯನ್ನು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಪ್ರಸ್ತುತ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ನೀರು ಮತ್ತು ವಿದ್ಯುತ್ ನಂತಹ ಅಮೂಲ್ಯ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು ಪ್ರತಿಯೊಬ್ಬ ಅಧಿಕಾರಿಯ ಹಾಗೂ ಸಿಬ್ಬಂದಿಯ ಜವಾಬ್ದಾರಿಯಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
