ಮೈಸೂರು, (ಜುಲೈ 16): ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಸ್ಪರ್ಧೆ ನಡೆಸುವುದು ಖಚಿತ ಎಂದು ಶಾಸಕ ಅಶೋಕ್ ರೈ ಸ್ಪಷ್ಟಪಡಿಸಿದ್ದಾರೆ. ಕಂಬಳ ಆಯೋಜನೆ ಕುರಿತು ಎದ್ದಿರುವ ವಿರೋಧದ ನಡುವೆಯೇ ಅವರು ಈ ಹೇಳಿಕೆ ನೀಡಿದ್ದು, ಸಾಂಪ್ರದಾಯಿಕ ಕಂಬಳವನ್ನು ಮುಖ್ಯವಾಹಿನಿಗೆ ತರುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಅವರು, ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಕೋಣಗಳನ್ನು ಓಡಿಸಿರುವ ಅನುಭವಿ ವ್ಯಕ್ತಿಗಳನ್ನು ಸಮಿತಿಗೆ ಸೇರಿಸಲಾಗಿದೆ. ಅವರ ಅಭಿಪ್ರಾಯವನ್ನು ಪಡೆದು ದಸರಾ ಮಹೋತ್ಸವದಲ್ಲಿ ಕಂಬಳ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಂಬಳ ಆಯೋಜನೆ ವೇಳೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಬಳಿಕ ಪರಿಸ್ಥಿತಿ ಬದಲಾಗಿದ್ದು, ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿತ್ತು. ಬೆಂಗಳೂರಿನ ಕಂಬಳದಲ್ಲಿ 175 ಕೋಣಗಳು ಭಾಗವಹಿಸಿದ್ದರೆ, ಮೈಸೂರು ದಸರಾ ಕಂಬಳಕ್ಕೆ ಈಗಾಗಲೇ 182 ಕೋಣಗಳ ನೋಂದಣಿ ಆಗಿದೆ. ಅವುಗಳಲ್ಲಿ ಸುಮಾರು 175 ಕೋಣಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಂಬಳಕ್ಕೆ ಅನುದಾನದ ವಿಚಾರದಲ್ಲಿಯೂ ಪ್ರತಿಕ್ರಿಯಿಸಿದ ಅಶೋಕ್ ರೈ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ನೀಡಲಾಗಿತ್ತು ಎಂಬುದನ್ನು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಈಗಾಗಲೇ 23 ಕಂಬಳ ಸ್ಪರ್ಧೆಗಳಿಗೆ ₹1.15 ಕೋಟಿ ಅನುದಾನ ನೀಡಿದೆ. ಕಂಬಳಕ್ಕೆ ಅಧಿಕೃತ ಮಾನ್ಯತೆ ಮತ್ತು ಹೆಚ್ಚಿನ ಪ್ರಾತಿನಿಧ್ಯ ದೊರಕಿದರೆ ಭವಿಷ್ಯದಲ್ಲಿ ಇನ್ನಷ್ಟು ಅನುದಾನ ದೊರೆಯಲಿದೆ ಎಂದು ಹೇಳಿದರು.
ಮೈಸೂರು ಅರಮನೆ ಹಾಗೂ ಕಂಬಳದ ನಡುವಿನ ಸಂಬಂಧದ ಕುರಿತು ಮಾತನಾಡಿದ ಅವರು, ಈ ಹಿಂದೆ ರಾಜಮಾತೆಯವರು ಕೂಡ ಬೆಂಗಳೂರಿನ ಕಂಬಳಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಐತಿಹಾಸಿಕ ಹಿನ್ನೆಲೆ ಮತ್ತು ಅರಮನೆಗೂ ಕೋಣಗಳಿಗೂ ಇರುವ ಸಂಬಂಧವನ್ನು ವಿವರಿಸಿದ ನಂತರವೇ ಅವರು ಕಂಬಳಕ್ಕೆ ಒಪ್ಪಿಗೆ ನೀಡಿದ್ದರು ಎಂದು ಹೇಳಿದರು.
ಕಂಬಳ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದ ಅಶೋಕ್ ರೈ, ಮುಖ್ಯಮಂತ್ರಿ ಅವರ ಅಂತಿಮ ಸೂಚನೆ ದೊರೆತ ಬಳಿಕ ಅಗತ್ಯ ಸಿದ್ಧತೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಮೈಸೂರು ದಸರಾ ವೇಳೆ ಸುಮಾರು 25ರಿಂದ 30 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ಕಂಬಳ ಸ್ಪರ್ಧೆ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಗೆ ಮತ್ತಷ್ಟು ಮೆರುಗು ತರುತ್ತದೆ ಎಂದು ಶಾಸಕ ಅಶೋಕ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
