ದಾವಣಗೆರೆ: ಕಾಂಗ್ರೆಸ್‌ನ ಹಿರಿಯ ನಾಯಕ, ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರು ಶಾಮನೂರು ಶಿವಶಂಕರಪ್ಪ ಅವರು ನಿನ್ನೆ (ಡಿಸೆಂಬರ್ 14) ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಇಂದು ಸಂಜೆ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಶಾಮನೂರು ಶಿವಶಂಕರಪ್ಪ ಅವರ ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದ್ದು, ರಾಜಕೀಯ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಈ ಮಹನೀಯನಿಗೆ ಕೊನೆಯ ಗೌರವ ಸಲ್ಲಿಸಲು ದಾವಣಗೆರೆ ನಗರವೇ ಸಾಕ್ಷಿಯಾಗುತ್ತಿದೆ.
ಮೃತದೇಹವನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಿಂದ ಮಧ್ಯರಾತ್ರಿ ಹೊರತರಲಾಗಿದ್ದು, ಇಂದು ಬೆಳಗ್ಗೆ ದಾವಣಗೆರೆಗೆ ತಲುಪಿತು. ನಂತರ ಅವರ ಹಿರಿಯ ಪುತ್ರ ಎಸ್ಎಸ್ ಬಕ್ಕೇಶ್ ನಿವಾಸ, ಎರಡನೇ ಪುತ್ರ ಎಸ್ ಎಸ್ ಗಣೇಶ ಅವರ ಮನೆ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಕಣ್ವೆಕುಪ್ಪೆ ಶ್ರೀಗಳ ಸಾನ್ನಿಧ್ಯದಲ್ಲಿ ಸಂಪ್ರದಾಯಬದ್ಧ ವಿಧಿವಿಧಾನಗಳು ನೆರವೇರಿದವು.
ಮೂರು ಮನೆಗಳಲ್ಲಿ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಶಾಮನೂರು ಶಿವಶಂಕರಪ್ಪ ಅವರ ನಿವಾಸದ ಮುಂಭಾಗ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು ಕಣ್ಣೀರಿನೊಂದಿಗೆ ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಮತ್ತೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ದರ್ಶನ ಮುಕ್ತಾಯವಾದ ಬಳಿಕ ದಾವಣಗೆರೆ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಅಂತಿಮಯಾತ್ರೆ ಮೆರವಣಿಗೆ ನಡೆಯಲಿದೆ. ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗುವ ಮೆರವಣಿಗೆ ಹಳೇ ಕೋರ್ಟ್ ಮೈದಾನ, ಎಸಿ ಕ್ರಾಸ್, ರೇಣುಕಾ ಮಂದಿರ ಸರ್ಕಲ್, ಅರುಣ ಸರ್ಕಲ್, ಹೊಂಡದ ಸರ್ಕಲ್, ದುರ್ಗಾಂಬಿಕ ದೇವಾಲಯ, ಹಗೆದಿಬ್ಬ ಸರ್ಕಲ್, ಕಾಳಿಕಾಂಬ ದೇವಸ್ಥಾನ ರಸ್ತೆ, ಗ್ಯಾಸ್ ಕಟ್ಟೆ ಸರ್ಕಲ್, ಬಕ್ಕೇಶ್ವರ ದೇವಸ್ಥಾನ, ಹಾಸಭಾವಿ ಸರ್ಕಲ್, ಗಣೇಶ ದೇವಸ್ಥಾನ, ಅರಳಿ ಮರ ಸರ್ಕಲ್ ಹಾಗೂ ವೆಂಕಟೇಶ್ವರ ಸರ್ಕಲ್ ಮೂಲಕ ಸಾಗುತ್ತಾ ಕಲ್ಲೇಶ್ವರ ರೈಸ್ ಮಿಲ್ ತಲುಪಲಿದೆ.
ಸುಮಾರು 15 ಕಿಲೋಮೀಟರ್ ದೂರದ ಈ ಅಂತಿಮಯಾತ್ರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಬಹುಕಾಲದ ಮನವಿಯ ಫಲವಾಗಿದೆ. “ನಗರದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಾಯಕನಿಗೆ ನಗರಮಧ್ಯೆ ಗೌರವಯುತ ವಿದಾಯ ಬೇಕು” ಎಂಬ ಅಭಿಮಾನಿಗಳ ಒತ್ತಾಸೆಯನ್ನು ಕುಟುಂಬ ಹಾಗೂ ಪಕ್ಷದ ನಾಯಕರು ಗೌರವಿಸಿದ್ದಾರೆ.
ಸಂಜೆ ಸುಮಾರು 6 ಗಂಟೆಯ ವೇಳೆಗೆ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಈ ಸಂದರ್ಭ ರಾಜ್ಯ ಸರ್ಕಾರದ ಪ್ರತಿನಿಧಿಗಳು, ವಿವಿಧ ಪಕ್ಷಗಳ ನಾಯಕರು, ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.
