ಬೆಂಗಳೂರು, ಡಿಸೆಂಬರ್ 21: ಕರ್ನಾಟಕದಲ್ಲಿ ಹವಾಮಾನದಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬದಲಾವಣೆಗಳು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿವೆ. ವಿಶೇಷವಾಗಿ ಚಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೀಸನಲ್ ಫ್ಲೂ (Seasonal Flu) ಭೀತಿ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (Karnataka Health Department) ಮುಂಜಾಗ್ರತಾ ಕ್ರಮವಾಗಿ ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಎಲ್ಲಾ ಜಿಲ್ಲೆಗಳು ಹಾಗೂ ಸರ್ಕಾರಿ–ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ.
ಆರೋಗ್ಯ ಇಲಾಖೆ ಮಾಹಿತಿಯಂತೆ, ಡಿಸೆಂಬರ್‌ನಿಂದ ಜನವರಿ-ಮಾರ್ಚ್‌ವರೆಗೆ ಸೀಸನಲ್ ಫ್ಲೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ILI (Influenza Like Illness) ಹಾಗೂ SARI (Severe Acute Respiratory Infection) ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕಡ್ಡಾಯ ಪರೀಕ್ಷೆ ನಡೆಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸೀಸನಲ್ ಫ್ಲೂ ಸಾಮಾನ್ಯವಾಗಿ ಸೋಂಕಿತರ ಎಂಜಿಲು, ಕೆಮ್ಮು ಅಥವಾ ಶೀತದ ಮೂಲಕ ಇತರರಿಗೆ ಹರಡುತ್ತದೆ. ಈ ಸೋಂಕು ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಹಾಗೂ ಈಗಾಗಲೇ ಬೇರೆ ಕಾಯಿಲೆಗಳಿಗೆ ಔಷಧ ಸೇವಿಸುತ್ತಿರುವವರಿಗೆ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ. ಕೆಲವರಲ್ಲಿ ಸೋಂಕು ತೀವ್ರಗೊಂಡರೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯೂ ಉಂಟಾಗಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಸೀಸನಲ್ ಫ್ಲೂ ಲಕ್ಷಣಗಳು
ಆರೋಗ್ಯ ತಜ್ಞರ ಪ್ರಕಾರ, ಸೀಸನಲ್ ಫ್ಲೂನ ಪ್ರಮುಖ ಲಕ್ಷಣಗಳಲ್ಲಿ ಜ್ವರ, ಕೆಮ್ಮು, ಶೀತ, ಒಣ ಕೆಮ್ಮು, ಮೈ–ಕೈ ನೋವು, ತಲೆನೋವು, ಹಸಿವು ಕಡಿಮೆಯಾಗುವುದು ಸೇರಿವೆ. ಸಾಮಾನ್ಯವಾಗಿ ಈ ಸೋಂಕು ಒಂದು ವಾರದೊಳಗೆ ನಿಯಂತ್ರಣಕ್ಕೆ ಬರಬಹುದು, ಕೆಲವರಲ್ಲಿ ಇದು 2–3 ವಾರಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಲಕ್ಷಣಗಳು ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗಿದೆ.
ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯ ಪ್ರಮುಖ ಸೂಚನೆಗಳು
ಸೀಸನಲ್ ಫ್ಲೂ ನಿಯಂತ್ರಣಕ್ಕಾಗಿ ರಾಜ್ಯದ ಎಲ್ಲಾ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಿಗೆ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ.
-
ಪ್ರತಿ ದಿನ ಕನಿಷ್ಠ 5 ILI ಪ್ರಕರಣಗಳು ಹಾಗೂ 100 SARI ಪ್ರಕರಣಗಳ ಪರೀಕ್ಷೆ ಕಡ್ಡಾಯ
-
ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಲ್ಯಾಬ್ಗಳಲ್ಲಿ ಅಗತ್ಯವಿರುವ ಟೆಸ್ಟಿಂಗ್ ಕಿಟ್ಗಳ ಶೇಖರಣೆ
-
PPE ಕಿಟ್ಗಳು, N95 ಮಾಸ್ಕ್ಗಳು, Oseltamivir ಮಾತ್ರೆಗಳು ಸೇರಿದಂತೆ ಅಗತ್ಯ ಔಷಧಗಳ ಸಂಗ್ರಹ
-
ಇನ್ಫ್ಲೂಯೆನ್ಸ್ (Flu Vaccine) ಲಸಿಕೆಗಳ ಲಭ್ಯತೆ ಖಚಿತಪಡಿಸಿಕೊಳ್ಳುವುದು
-
ಆರೋಗ್ಯ ಸಿಬ್ಬಂದಿ, ಗರ್ಭಿಣಿಯರು ಹಾಗೂ ಹೆಚ್ಚಿನ ಅಪಾಯದಲ್ಲಿರುವವರು ಲಸಿಕೆ ಪಡೆಯುವಂತೆ ಪ್ರೋತ್ಸಾಹ
-
ಕ್ರಿಟಿಕಲ್ ಕೇರ್ ವ್ಯವಸ್ಥೆ ಬಲಪಡಿಸಿ ವೆಂಟಿಲೇಟರ್ಗಳ ಸಿದ್ಧತೆ
-
ಸೋಂಕಿತರ ನಿರಂತರ ಮಾನಿಟರಿಂಗ್ ಮತ್ತು ತ್ವರಿತ ಚಿಕಿತ್ಸೆ ವ್ಯವಸ್ಥೆ
ಜನರಿಗೆ ಆರೋಗ್ಯ ಇಲಾಖೆಯ ಸಲಹೆ
ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸಹ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ನಿಯಮಿತವಾಗಿ ತೊಳೆಯುವುದು, ಕೆಮ್ಮು–ಶೀತ ಇರುವವರು ಪ್ರತ್ಯೇಕವಾಗಿರುವುದು, ಸ್ವಯಂ ಔಷಧ ಸೇವನೆ ತಪ್ಪಿಸುವುದು ಹಾಗೂ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.
ಸೀಸನಲ್ ಫ್ಲೂ ಸಾಮಾನ್ಯ ಸೋಂಕು ಎನ್ನುವ ನಿರ್ಲಕ್ಷ್ಯ ಬೇಡ. ಸರಿಯಾದ ಮುನ್ನೆಚ್ಚರಿಕೆ, ಸಮಯೋಚಿತ ಚಿಕಿತ್ಸೆ ಮತ್ತು ಆರೋಗ್ಯ ಇಲಾಖೆ ಮಾರ್ಗಸೂಚಿಗಳ ಪಾಲನೆಯಿಂದ ಮಾತ್ರ ಈ ಭೀತಿಯನ್ನು ನಿಯಂತ್ರಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
