RTO ಭರ್ಜರಿ ಕಾರ್ಯಾಚರಣೆ: ಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿ ಚಾಲಕರಿಗೆ ಶಾಕ್!

ಈಶ್ವರ ಖಂಡ್ರೆ (18)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಸಾರಿಗೆ ಇಲಾಖೆ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಎರಡು ವಾರಗಳ ಕಾಲ ನಡೆಯಲಿರುವ ಈ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿ (RTO) ವ್ಯಾಪ್ತಿಗಳಲ್ಲಿ ಬೈಕ್ ಟ್ಯಾಕ್ಸಿಗಳನ್ನು ತಪಾಸಣೆ ನಡೆಸಿ ಜಪ್ತಿ ಮಾಡುವ ಕಾರ್ಯ ಜೋರಾಗಿ ನಡೆಯುತ್ತಿದೆ.

ಕಾರ್ಯಾಚರಣೆಯ ಮೊದಲ ದಿನವೇ ಯಲಹಂಕದ ಸಿಂಗನಾಯಕನಹಳ್ಳಿ ಆರ್‌ಟಿಒ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಬೈಕ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ಕೆಲವು ಬೈಕ್ ಸವಾರರ ಮೊಬೈಲ್‌ಗಳನ್ನು ಕೂಡ ವಶಪಡಿಸಿಕೊಂಡು, ಆ್ಯಪ್‌ಗಳ ಮೂಲಕ ಬಾಡಿಗೆ ಸೇವೆ ನೀಡಲಾಗುತ್ತಿದೆಯೇ ಎಂಬುದರ ಕುರಿತು ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಸಾರಿಗೆ ಇಲಾಖೆ ನೀಡಿರುವ ಮಾಹಿತಿಯಂತೆ, ಮೊಬೈಲ್ ಆ್ಯಪ್‌ಗಳ ಮೂಲಕ ಅಗತ್ಯ ಪರವಾನಗಿ ಇಲ್ಲದೆ ಬಾಡಿಗೆ ಸೇವೆ ನೀಡುತ್ತಿರುವ ಬೈಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಬೆಂಗಳೂರು ಪಶ್ಚಿಮ ಆರ್‌ಟಿಒ ವ್ಯಾಪ್ತಿಯಲ್ಲಿ 10 ಬೈಕ್‌ಗಳು, ಉತ್ತರ ಆರ್‌ಟಿಒ ವ್ಯಾಪ್ತಿಯಲ್ಲಿ 8 ಬೈಕ್‌ಗಳು ಹಾಗೂ ರಾಜಾಜಿನಗರ ಆರ್‌ಟಿಒ ವ್ಯಾಪ್ತಿಯಲ್ಲಿ 12 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆ ನಗರದ ಒಟ್ಟು 11 ಆರ್‌ಟಿಒ ವ್ಯಾಪ್ತಿಗಳಲ್ಲಿ ಮುಂದುವರಿಯಲಿದೆ.

ವಾಹನ ಜಪ್ತಿ ಮಾಡುವುದರ ಜೊತೆಗೆ ನಿಯಮ ಉಲ್ಲಂಘಿಸಿ ಬೈಕ್ ಟ್ಯಾಕ್ಸಿ ಸೇವೆ ನಡೆಸುತ್ತಿರುವ ಚಾಲಕರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಂಬಂಧಿತ ಚಾಲಕರ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ ವಾಹನದ ನೋಂದಣಿ ಪ್ರಮಾಣಪತ್ರ (RC) ಅಮಾನತು ಮಾಡುವ ಪ್ರಕ್ರಿಯೆಯನ್ನೂ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ರಾಜಾಜಿನಗರ ಆರ್‌ಟಿಒ ಕಚೇರಿ ಬಳಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. 50ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರ‍್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಚಾಲಕರು, ಕೆಲ ಆಟೋ ಚಾಲಕರೇ ಬೈಕ್ ಟ್ಯಾಕ್ಸಿ ಬುಕ್ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ವಾಹನಗಳನ್ನು ಸೀಜ್ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ವಿಚಾರವಾಗಿ ಚಾಲಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆದಿರುವ ಮಾಹಿತಿ ಲಭ್ಯವಾಗಿದೆ.

ಸಾರಿಗೆ ಇಲಾಖೆ ಸ್ಪಷ್ಟಪಡಿಸಿರುವಂತೆ, ಈ ವಿಶೇಷ ಕಾರ್ಯಾಚರಣೆ ಇನ್ನೂ ಒಂದು ವಾರಕ್ಕೂ ಹೆಚ್ಚು ಕಾಲ ಮುಂದುವರಿಯಲಿದೆ. ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿ ಸೇವೆ ನಡೆಸುವವರ ವಿರುದ್ಧ ವಾಹನ ಜಪ್ತಿ, ದಾಖಲೆಗಳ ಅಮಾನತು ಸೇರಿದಂತೆ ಇನ್ನಷ್ಟು ಕಠಿಣ ಕ್ರಮ ಜಾರಿಯಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಸಾರಿಗೆ ಇಲಾಖೆಯ ನಿಯಮಗಳನ್ನು ಪಾಲಿಸಿ ಮಾತ್ರ ಬಾಡಿಗೆ ಸೇವೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Exit mobile version