ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ರೌಡಿಶೀಟರ್‌‌ ಭೀಮನಗೌಡ ಬಿರಾದಾರ್‌ಗೆ ಗುಂಡೇಟು

Untitled design 2025 09 03t121537.763

ವಿಜಯಪುರ: ವಿಜಯಪುರದಲ್ಲಿ ಗುಂಡಿನ ಸದ್ದು ಕೇಳಿಬಂದಿದ್ದು, ದುಷ್ಕರ್ಮಿಗಳು ರೌಡಿಶೀಟರ್‌ ಮೇಲೆ ಫೈರಿಂಗ್‌ ಮಾಡಿ ಪರಾರಿಯಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ರೌಡಿಶೀಟರ್‌ ಸಾವನ್ನಪ್ಪಿದ್ದಾರೆ.

ಘಟನೆಯ ವಿವರ

ರೌಡಿಶೀಟರ್‌‌ ಭೀಮನಗೌಡ ಬಿರಾದಾರ್, ದೇವರ ನಿಂಬರಗಿ ಗ್ರಾಮದ ಸ್ಥಳೀಯ ಕಟಿಂಗ್ ಶಾಪ್‌ಗೆ ಕೂದಲು ಕತ್ತರಿಸಲು ತೆರಳಿದ್ದ ವೇಳೆ, ಮೂರು ರಿಂದ ನಾಲ್ಕು ಮಂದಿ ಮುಸುಕುಧಾರಿಗಳು ಒಳನುಗ್ಗಿದ್ದಾರೆ. ದುಷ್ಕರ್ಮಿಗಳು ಮೊದಲಿಗೆ ಕಟಿಂಗ್ ಶಾಪ್‌ನ ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ಭೀಮನಗೌಡನ ತಲೆ ಮತ್ತು ಎದೆಗೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದ ಭೀಮನಗೌಡ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ದುಷ್ಕರ್ಮಿಗಳು ಗುಂಡು ಹಾರಿಸಿದ ತಕ್ಷಣ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ.

ಗಾಯಗೊಂಡ ಭೀಮನಗೌಡನನ್ನು ತಕ್ಷಣ ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಭೀಮನಗೌಡ ಬಿರಾದಾರ್ ಸ್ಥಳೀಯ ರಾಜಕೀಯದಲ್ಲಿ ಸಕ್ರಿಯವಾಗಿದ್ದ ವ್ಯಕ್ತಿಯಾಗಿದ್ದು, ಬೈರಗೊಂಡ ಮಹದೇವ ಸಾಹುಕಾರನ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆತ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರೂ, ಕೇವಲ ಆರು ತಿಂಗಳ ಅವಧಿಯಲ್ಲಿ ರಾಜೀನಾಮೆ ನೀಡಿದ್ದ. ಈ ರಾಜೀನಾಮೆಯ ಹಿನ್ನೆಲೆಯಲ್ಲಿ ಭೀಮನಗೌಡ ಮತ್ತು ಮುಜಾವರ್ ಕುಟುಂಬದ ನಡುವೆ ತೀವ್ರ ವೈಷಮ್ಯ ಉಂಟಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಜಗಳವೇ ಈ ಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಳೆಯ ವೈಷಮ್ಯದಿಂದಾಗಿ ಈ ಗುಂಡಿನ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸ್ ತನಿಖೆಯ ಮೂಲಗಳು ತಿಳಿಸಿವೆ. ಭೀಮನಗೌಡನ ಹತ್ಯೆಯ ಹಿಂದೆ ಗ್ರಾಮದ ರಾಜಕೀಯ ಕಲಹ ಮತ್ತು ವೈಯಕ್ತಿಕ ದ್ವೇಷವೇ ಮುಖ್ಯ ಕಾರಣವಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ಸ್ಥಳಕ್ಕೆ ಚಡಚಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಬೆಂಡೆಗುಂಬಳ್ ಮತ್ತು ಇತರ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಯಾಗಿದ್ದು, ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಣೆ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮತ್ತು ಸ್ಥಳೀಯರಿಂದ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ.

Exit mobile version