ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ: 700 ರೂಪಾಯಿಗೆ ಮಾರಾಟ, ಓರ್ವ ಆರೋಪಿ ಅರೆಸ್ಟ್

Untitled design 2025 12 18T231100.696

ಬೆಂಗಳೂರು (ಡಿ.18): ಖ್ಯಾತ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಇಂದಿರಾನಗರ ಪೊಲೀಸರು ಭೇದಿಸಿದ್ದಾರೆ. ಮನೆ ಮುಂಭಾಗದಲ್ಲಿದ್ದ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕಳ್ಳತನ ಮಾಡಿ ಕೇವಲ 700 ರೂಪಾಯಿಗೆ ಮಾರಾಟ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮನೆ ಖಾಲಿ ಇದ್ದ ಸಂದರ್ಭದಲ್ಲೇ ಕೃತ್ಯ

ಇತ್ತೀಚೆಗೆ ರಿಕ್ಕಿ ಕೇಜ್ ಹಾಗೂ ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇಲ್ಲದ ಸಮಯವನ್ನು ಗಮನಿಸಿದ ಆರೋಪಿಗಳು ಕಳ್ಳತನಕ್ಕೆ ಮುಂದಾಗಿದ್ದಾರೆ. ಸಂಜೆ ವೇಳೆ ಹೆಲ್ಮೆಟ್ ಧರಿಸಿ ಡೆಲಿವರಿ ಸಿಬ್ಬಂದಿಯಂತೆ ನಟಿಸಿ ಮನೆಗೆ ಆಗಮಿಸಿದ ಆರೋಪಿ, ನೇರವಾಗಿ ಮನೆಯ ಮುಂಭಾಗದಲ್ಲಿದ್ದ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಯಾವುದೇ ಸಂಶಯ ಬಾರದಂತೆ ವರ್ತಿಸಿದ್ದ ಈ ಆರೋಪಿ ಕೆಲವೇ ನಿಮಿಷಗಳಲ್ಲಿ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ರಿಕ್ಕಿ ಕೇಜ್ ಮನೆಯ ಹೊರಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿತ್ತು. ಈ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯ ಚಲನವಲನ, ವೇಷಭೂಷಣ ಮತ್ತು ವಾಹನದ ಮಾಹಿತಿ ಸಂಗ್ರಹಿಸಿದರು. ಇದೇ ಸಿಸಿಟಿವಿ ದೃಶ್ಯಗಳು ಪ್ರಕರಣ ಭೇದಿಸಲು ಪ್ರಮುಖ ಸಾಕ್ಷ್ಯವಾಗಿವೆ.

ಗುಜರಿ ಕೆಲಸ ಮಾಡಿಕೊಂಡಿದ್ದ ಆರೋಪಿ

ಬಂಧಿತ ಆರೋಪಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಆತ ಗುಜರಿ (ಸ್ಕ್ರಾಪ್) ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಕೂಡ ವಿವಿಧ ಪ್ರದೇಶಗಳಿಂದ ಕಬ್ಬಿಣ, ಲೋಹದ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದನೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದೇ ಉದ್ದೇಶದಿಂದ ರಿಕ್ಕಿ ಕೇಜ್ ಮನೆಯ ಸಂಪ್ ಮುಚ್ಚಳವನ್ನು ಕದ್ದು 700 ರೂಪಾಯಿಗೆ ಮಾರಾಟ ಮಾಡಿದ್ದಾನೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.

ಇನ್ನೊಬ್ಬ ಆರೋಪಿಗಾಗಿ ಶೋಧ

ಈ ಕಳ್ಳತನ ಪ್ರಕರಣದಲ್ಲಿ ಶಿವಕುಮಾರ್ ಒಬ್ಬನೇ ಅಲ್ಲ, ಮತ್ತೊಬ್ಬ ಆರೋಪಿ ಸಹ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಸೇರಿ ಯೋಜಿತವಾಗಿ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರಾರಿಯಾಗಿರುವ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ರಿಕ್ಕಿ ಕೇಜ್ ಪ್ರತಿಕ್ರಿಯೆ

ಕಳ್ಳತನ ನಡೆದ ಬಳಿಕ ರಿಕ್ಕಿ ಕೇಜ್ ಅವರು ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಈ ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ರಿಕ್ಕಿ ಕೇಜ್ ನೀಡಿದ ದೂರಿನ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಸಿಸಿಟಿವಿ ದೃಶ್ಯಗಳು, ಸ್ಥಳ ಪರಿಶೀಲನೆ ಮತ್ತು ಗುಪ್ತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version