ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿ ಪ್ರದೋಶ್ ಹೇಳಿಕೆಯಿಂದ ದರ್ಶನ್‌ಗೆ ಸಂಕಷ್ಟ!

ಬಲಿಷ್ಠ (49)

ಮಾಫಿ ಸಾಕ್ಷಿ ಪ್ರದೋಶ್ ಹೇಳಿಕೆಯಿಂದಾಗಿ ರೇಣುಕಾಸ್ವಾಮಿ ಮರ್ಡರ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ನಟ ದರ್ಶನ್ ಮೇಲೆ ಇದ್ದಂತಹ ಆ ಕನಿಕರತೆ ಇದೀಗ ಇಲ್ಲದಂತಾಗಿದೆ. ಅದಕ್ಕೆ ಕಾರಣ ರೇಣುಕಾಸ್ವಾಮಿಗೆ ದರ್ಶನ್ ಕೊಟ್ಟಿರೋ ಟಾರ್ಚರ್. ಸಿಗರೇಟ್‌‌ನಿಂದ ಸುಟ್ಟು ಚಿತ್ರಹಿಂಸೆ ನೀಡೋದು ದಾಸ ದರ್ಶನ್‌ಗೆ ಹೊಸತೇನಲ್ಲ. ಈ ಹಿಂದೆ ಪತ್ನಿ.. ಈಗ ರೇಣುಕಾಸ್ವಾಮಿ. ಯೆಸ್.. ಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ಹೇಗೆ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಗುಪ್ತಾಂಗಕ್ಕೆ ಒದ್ದು.. ನೈಲಾನ್ ಹಗ್ಗದಿಂದ ಥಳಿಸಿದ್ದ ದರ್ಶನ್..!

ಸ್ವಾಮಿಗೆ ಸಿಗರೇಟ್‌‌ನಿಂದ ಸುಟ್ಟು.. ದಚ್ಚು ಮಾರಣಾಂತಿಕ ಹಲ್ಲೆ

ಸ್ವಾಮಿ ಎದೆ ಮೇಲೆ ಎರಡೂ ಕಾಲುಗಳಿಂದ ತುಳಿದಿದ್ದ ದಾಸ

ಓ ಮೈ ಗಾಡ್.. ಬಯಲಾಯ್ತು ದರ್ಶನ್ ನೀಡಿದ ಚಿತ್ರಹಿಂಸೆ

ರೇಣುಕಾಸ್ವಾಮಿ ಮರ್ಡರ್ ಕೇಸ್‌‌‌‌ಗೆ ಬರೋಬ್ಬರಿ 2 ವರ್ಷ 2 ತಿಂಗಳಾಗಿದೆ. ಇಲ್ಲಿಯವರೆಗೂ ಒಂದು ಲೆಕ್ಕ ಆದ್ರೆ.. ಇಲ್ಲಿಂದ ಈಚೆಗೆ ಹೊಸ ಲೆಕ್ಕ ಶುರುವಾಗಲಿದೆ. ಹೌದು.. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌‌‌‌ಗೆ ಮಾಫಿ ಸಾಕ್ಷಿಯ ಅರ್ಜಿ, ಹೇಳಿಕೆಗಳು ಸಿಕ್ಕಾಪಟ್ಟೆ ಸಂಕಷ್ಟ ತಂದೊಡ್ಡಿವೆ. ಎಲ್ಲೋ ಒಂದು ಕಡೆ ನಟ ದರ್ಶನ್ ದೋಷ ಮುಕ್ತರಾಗಬಹುದು ಅಥ್ವಾ ಬೇಲ್ ಪಡೆದು ಹೊರಗೆ ಬರ್ತಾರೆ ಅನ್ನೋ ಭರವಸೆ ಇತ್ತು. ಇದೀಗ ಮತ್ತಷ್ಟು ದೂರವಾಗಿದೆ.

ಆರೋಪಿ ನಂ.14 ಮಿಸ್ಟರ್ ಪ್ರದೋಶ್ ನೀಡಿದ ಮಾಫಿ ಸಾಕ್ಷಿಯನ್ನ ಗಮನಿಸಿದ್ರೆ ದಾಸನಿಗೆ ಜೈಲು ಖಾಯಂ ಅನಿಸ್ತಿದೆ. ಹೌದು.. ರೇಣುಕಾಸ್ವಾಮಿ ಕೊಲೆ ನಡೆದ ಆಸುಪಾಸಿನಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ ಬರೋಬ್ಬರಿ 11 ಪುಟಗಳ ಬಹುದೊಡ್ಡ ಅರ್ಜಿಯಲ್ಲಿ ಉಲ್ಲೇಖಿಸಿ, ಮಾಫಿ ಸಾಕ್ಷಿಗೆ ಕೋರಿದ್ರು. ಅದರಲ್ಲಿ ನಟ ದರ್ಶನ್ ಎಷ್ಟು ಕ್ರೂರಿ, ಹೇಗೆಲ್ಲಾ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ ಅನ್ನೋದನ್ನ ಉಲ್ಲೇಖಿಸಲಾಗಿದೆ.

59ನೇ ಸಿಸಿಹೆಚ್ ಕೋರ್ಟ್‌‌ನಲ್ಲಿ ಮಾಫಿ ಸಾಕ್ಷಿಯ ಅರ್ಜಿ ಸಲ್ಲಿಸಿರೋ ಆರೋಪಿ ಪ್ರದೋಶ್, ಅಪ್ರೂವರ್ ಆಗಲು ಮುಂದಾಗಿದ್ರು. ಆ ಅರ್ಜಿಯ ಪ್ರಕಾರ ಕೊಲೆ ನಡೆಯುತ್ತಿದ್ದ ವೇಳೆ ರೇಣುಕಾಸ್ವಾಮಿಯನ್ನು ರಕ್ಷಿಸಲು ಯತ್ನಿಸಿದ್ದರಂತೆ ಪ್ರದೋಶ್. ಹಲ್ಲೆ ನಿಲ್ಲಿಸುವಂತೆ ಸಹ ಆರೋಪಿಗಳಿಗೆ ತಾನು ಮನವಿ ಮಾಡಿದ್ರಂತೆ. ದರ್ಶನ್ ಜೊತೆ 20 ವರ್ಷಗಳ ಸ್ನೇಹವಿರೋ ಪ್ರದೋಶ್.. 2024ರ ಜೂನ್ 08ರಂದು ಆರೋಪಿ ದಚ್ಚು ನಿವಾಸಕ್ಕೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ. ಬಳಿಕ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್‌ಗೆ ದರ್ಶನ್ ಕರೆದೊಯ್ದರು. ಮಧ್ಯಾಹ್ನ 3 ಗಂಟೆಗೆ ಪವನ್ ರೆಸ್ಟೋರೆಂಟ್‌ಗೆ ಬಂದಿದ್ದ. ದರ್ಶನ್‌ಗೆ ಮೊಬೈಲ್‌ನಲ್ಲಿ ಏನೋ ತೋರಿಸಿದ್ದಾಗಿ ಅರ್ಜಿಯಲ್ಲಿ ವಿವರಿಸಿದ್ದಾನೆ. ಬಳಿಕ ದರ್ಶನ್ ಪವಿತ್ರಾ ಗೌಡಗೆ ಕರೆ ಮಾಡಿ ಮಾತನಾಡಿದ್ದನ್ನು ಪ್ರದೋಶ್ ಖಚಿತಪಡಿಸಿದ್ದಾನೆ.

ದರ್ಶನ್ ಸೂಚನೆ ಮೇರೆಗೆ ಪವಿತ್ರಾ ಗೌಡ ನಿವಾಸದ ಕಡೆಗೆ ಕಾರು ಚಲಾಯಿಸಿ, ಸಂಜೆ 4.30ಕ್ಕೆ ಪವಿತ್ರಾ ಗೌಡ ನಿವಾಸ ತಲುಪಿದ್ರು. ದರ್ಶನ್ ಹಾಗೂ ಪವಿತ್ರ ಒಂದೇ ಕಾರಿನಲ್ಲಿ ಪಟ್ಟಣಗೆರೆ ಶೆಡ್‌‌ಗೆ ಎಂಟ್ರಿ. ಶೆಡ್‌ಗೆ ಪ್ರವೇಶಿಸಿದಾಗ ಸುಮಾರು 30+ ವರ್ಷದ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದ. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್, ನಂದೀಶ್ ಹಾಗೂ ಇತರರು ಸ್ಥಳದಲ್ಲಿದ್ರು. ದರ್ಶನ್ ರೇಣುಕಾಸ್ವಾಮಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.

ಒಳ ಉಡುಪು ತೆಗೆಸಿ ಒದ್ದು ಒದ್ದು ಹಿಂಸೆ ನೀಡಿದ್ದ ದರ್ಶನ್

ಪವಿತ್ರಾ ಗೌಡನ ಕರೆತಂದು.. ಚಪ್ಪಲಿಯಲ್ಲಿ ಹೊಡೆಸಿದ ದಚ್ಚು

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಮತ್ತು ಖಾಸಗಿ ಅಂಗಗಳ ಫೋಟೋ ಕಳುಸ್ತೀಯಾ ಅಂತ ಹಲ್ಲೆ ಮಾಡಿದ್ರು. ದರ್ಶನ್ ರೇಣುಕಾಸ್ವಾಮಿಗೆ ಹೊಡೆದಿದ್ದನ್ನು ತಾನು ನೋಡಿದ್ದಾಗಿ ಪ್ರದೋಶ್ ತಿಳಿಸಿದ್ದಾರೆ. ರೇಣುಕಾಸ್ವಾಮಿ ತಲೆಯಿಂದ ರಕ್ತ ಬರುತ್ತಿರುವುದನ್ನು ಗಮನಿಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ದರ್ಶನ್ ಸೂಚನೆಯಂತೆ ಪವಿತ್ರಾ ಗೌಡರನ್ನ ರೇಣುಕಾಸ್ವಾಮಿ ಬಳಿಗೆ ಕರೆದುಕೊಂಡು ಹೋಗಿದ್ದ ಪ್ರದೋಶ್. ದರ್ಶನ್ ಅವರೇ ಪವಿತ್ರಾ ಗೌಡರಿಂದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ದರಂತೆ.

ಈ ವೇಳೆ ರೇಣುಕಾಸ್ವಾಮಿಯ ಬಟ್ಟೆಗಳನ್ನು ತೆಗೆದು, ಕೇವಲ ಒಳಉಡುಪಿನಲ್ಲಿ ಇರಿಸಲಾಗಿತ್ತಂತೆ. ಆರೋಪಿ ನಂದೀಶ್ ರೇಣುಕಾಸ್ವಾಮಿಯನ್ನು ಎತ್ತಿ ಟಾಟಾ ಏಸ್ ವಾಹನಕ್ಕೆ ನೇಣು ಹಾಕಲು ಪ್ರಯತ್ನಿಸಿದ್ದ. ನಂತರ ನಾಗರಾಜ್ ನೈಲಾನ್ ಹಗ್ಗದಿಂದ ಹಲ್ಲೆ ನಡೆಸಿದ. ನಂದೀಶ್ ಮತ್ತು ಪವನ್ ಮರದ ಕೋಲಿನಿಂದ ಹಲ್ಲೆ ಮಾಡಿದ್ರು. ನಟ ದರ್ಶನ್ ಕೂಡ ನೈಲಾನ್ ಹಗ್ಗದಿಂದ ರೇಣುಕಾಸ್ವಾಮಿಗೆ ಮೂರರಿಂದ ನಾಲ್ಕು ಬಾರಿ ಹೊಡೆದರು. ಈ ವೇಳೆ ಪವನ್ ರೇಣುಕಾಸ್ವಾಮಿಯ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಓದುತ್ತಿದ್ದ. ಸಂದೇಶಗಳ ಆಧಾರದ ಮೇಲೆ ದರ್ಶನ್ ಮತ್ತೆ ಮತ್ತೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡ್ತಿದ್ರು.

ರೇಣುಕಾಸ್ವಾಮಿ ಹಲವು ಮಹಿಳೆಯರಿಗೆ ಅಶ್ಲೀಲ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದ ಹಿನ್ನೆಲೆ.. ರೇಣುಕಾಸ್ವಾಮಿಯ ಒಳಉಡುಪನ್ನೂ ತೆಗೆದುಹಾಕಲಾಗಿತ್ತು. ದರ್ಶನ್ ರೇಣುಕಾಸ್ವಾಮಿಯ ಗುಪ್ತಾಂಗಕ್ಕೆ ಹಲವು ಬಾರಿ ಒದ್ದರು. ಬಳಿಕ ದರ್ಶನ್ ಎರಡೂ ಕಾಲುಗಳಿಂದ ರೇಣುಕಾಸ್ವಾಮಿಯ ಎದೆಯ ಮೇಲೆ ತುಳಿದರು ಅಂತ ಪ್ರದೋಶ್ ತಪ್ಪೊಪ್ಪಿಕೊಂಡಿದ್ದಾನೆ.

ಅದಾದ ಬಳಿಕ ಸಂಜೆ ಸುಮಾರು 5.30ಕ್ಕೆ ದರ್ಶನ್ ಮತ್ತು ವಿನಯ್ ಸ್ಥಳದಿಂದ ತೆರಳಿದ್ರು. ರೇಣುಕಾಸ್ವಾಮಿಯನ್ನು ನೋಡಿಕೊಳ್ಳಲು ರಾಘವೇಂದ್ರ, ನಂದೀಶ್, ದೀಪಕ್, ಲಕ್ಷ್ಮಣ್ ಮತ್ತಿತರರು ಸ್ಥಳದಲ್ಲೇ ಉಳಿದರು. ರೇಣುಕಾಸ್ವಾಮಿ ಮೃತಪಟ್ಟಿರುವ ವಿಚಾರವನ್ನು ದರ್ಶನ್‌ಗೆ ತಿಳಿಸಲು ಕೂಡಲೇ ದರ್ಶನ್‌ ಮನೆಗೆ ಹಿಂದಿರುಗಿದ್ದ ಪ್ರದೋಶ್. ಈ ವಿಚಾರ ಕೇಳಿ ದರ್ಶನ್ ಆಘಾತಕ್ಕೊಳಗಾದರು. ತನಗೆ ಸಹಾಯ ಮಾಡುವಂತೆ ದರ್ಶನ್ ಕೇಳಿಕೊಂಡರು. ಇಲ್ಲ ಅಂದ್ರೆ ತನ್ನ ಬಳಿ ಇರೋ ಗನ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರಂತೆ.

ಅಲ್ಲದೆ.. ರಾಘವೇಂದ್ರ, ನಂದೀಶ್ ಮತ್ತು ಪವನ್‌ಗೆ ಪೊಲೀಸರ ಮುಂದೆ ಶರಣಾಗುವಂತೆ ಪ್ರದೋಶ್ ಸೂಚಿಸಿದ್ದ. ಶೆಡ್‌ನ ಹೆಸರು ಬಹಿರಂಗಪಡಿಸದಂತೆ ವಿನಯ್ ತನ್ನನ್ನು ಬೆದರಿಸಿದ್ದಾಗಿಯೂ ಪ್ರದೋಶ್ ಆರೋಪಿಸಿದ್ದಾರೆ. ಇನ್ಸ್‌ಪೆಕ್ಟರ್ ವಿನಯ್‌ಗೆ ಕರೆ ಮಾಡಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾಗಿ ಪ್ರದೋಶ್ ಹೇಳಿದ್ದಾರೆ. ಪ್ರಕರಣ ಗಂಭೀರವಾಗಿರುವುದರಿಂದ ಆರೋಪಿಗಳನ್ನು ಶರಣಾಗುವಂತೆ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ಸೂಚಿಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖ. ನಂತ್ರ ರಾಘವೇಂದ್ರ ಮತ್ತು ಇತರರೊಂದಿಗೆ ದರ್ಶನ್ ಅವರನ್ನು ಭೇಟಿಯಾಗಲು ತೆರಳಿದ್ದಾಗಿ ಪ್ರದೋಶ್ ತಿಳಿಸಿದ್ದಾರೆ.

ರಾಘವೇಂದ್ರ ಶರಣಾಗಲು ಒಪ್ಪಿಕೊಂಡಾಗ ಮೃತದೇಹ ಸತ್ವ ಅಪಾರ್ಟ್‌ಮೆಂಟ್ ಬಳಿ ಬಿಸಾಡಿದ್ವಿ. ಬಳಿಕ ಕಾಮಾಕ್ಷಿಪಾಳ್ಯ ಠಾಣೆಗೆ ಸರೆಂಡರ್ ಆಗಲು ಹೋದರು ಅಂತ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈಗ ತನಗೆ ಪಶ್ಚಾತ್ತಾಪ ಆಗಿದ್ದು ಸಾಕ್ಷಿ ಹೇಳುತ್ತಿದ್ದೇನೆ ಅಂತ ಪ್ರದೋಶ್ ಅರ್ಜಿಯಲ್ಲಿ ಎಲ್ಲವನ್ನ ಖುಲ್ಲಂಖುಲ್ಲವಾಗಿ ಬಟಾ ಬಯಲು ಮಾಡಿದ್ದಾನೆ. ಈ ಕುರಿತು ಕೋರ್ಟ್‌‌ನಲ್ಲಿ ಸಾಕ್ಷಿಗಳನ್ನ ಕ್ರಾಸ್ ಎಕ್ಸಾಮಿನ್ ಮಾಡಲಾಗಿದ್ದು, ಕೋರ್ಟ್ ಪ್ರದೋಶ್ ಸಲ್ಲಿಸಿರೋ ಅರ್ಜಿ ಆದೇಶವನ್ನ ಪ್ರತ್ಯೇಕವಾಗಿ ಮಾಡೋದಾಗಿ ಹೇಳಿದೆ. ಅಲ್ಲದೆ ಸಹ ಆರೋಪಿಗಳು ಆಕ್ಷೇಪ ಸಲ್ಲಿಸಲು ಅವಕಾಶ ಇಲ್ಲ ಅಂತಲೂ ಕೋರ್ಟ್ ಆದೇಶ ನೀಡಿದೆ. ಒಟ್ಟಾರೆ ದರ್ಶನ್ ಗೆ ಮಾತ್ರ ಪ್ರದೋಶ್ ಸ್ಟೇಟ್ಮೆಂಟ್ ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗೋ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.

 

 

 

 

 

Exit mobile version