ಬೆಂಗಳೂರು (ಆಗಸ್ಟ್ 06, 2025): ಬೆಂಗಳೂರಿನ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿಅವರ ಜೋಡಿ ಹತ್ಯೆ ಪ್ರಕರಣದಲ್ಲಿ6 ಮಂದಿ ಆರೋಪಿಗಳನ್ನು ನರ್ಸಮ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಈ ಭೀಕರ ಕೃತ್ಯಕ್ಕೆ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದವೇ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿಗಳಾದ ಮಾಧವರೆಡ್ಡಿ, ಅನಿಲ್ ರೆಡ್ಡಿ, ನಾಗಿರೆಡ್ಡಿ, ಚಿನ್ನಾರೆಡ್ಡಿ ಅಲಿಯಾಸ್ ಇಂದ್ರಸೇನಾ ರೆಡ್ಡಿ, ಗೋಪಿ ರೆಡ್ಡಿ ಮತ್ತು ರಘುರಾಮ್ ರೆಡ್ಡಿ, ಈ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ವೀರಸ್ವಾಮಿ ರೆಡ್ಡಿ ಮತ್ತು ಮಾಧವರೆಡ್ಡಿ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಆದರೆ, 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ವಿಷಯದಲ್ಲಿ ಇಬ್ಬರ ನಡುವೆ ತೀವ್ರ ವೈಮನಸ್ಸು ಉಂಟಾಗಿತ್ತು. ಮಾಧವರೆಡ್ಡಿಯ ಪ್ರಕಾರ, ವೀರಸ್ವಾಮಿ ತನಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿದ್ದ ಎಂಬ ಆರೋಪವಿತ್ತು. ಈ ದ್ವೇಷದಿಂದ ಉಂಟಾದ ಕೋಪದಲ್ಲಿ, ಮಾಧವರೆಡ್ಡಿ ತನ್ನ ಮಾಜಿ ಪಾಲುದಾರನನ್ನು ಕೊಲೆ ಮಾಡಲು ವ್ಯವಸ್ಥಿತ ಸಂಚು ರೂಪಿಸಿದ್ದ. ರೌಡಿಗಳ ಗ್ಯಾಂಗ್ ಕಟ್ಟಿಕೊಂಡು, ಕೊಲೆಗೆ ಎಲ್ಲ ರೀತಿಯ ಯೋಜನೆಯನ್ನೂ ರೂಪಿಸಿದ್ದನು.
ಮಾಧವರೆಡ್ಡಿ ಮತ್ತು ಆತನ ಗ್ಯಾಂಗ್ ಈ ಕೊಲೆಯನ್ನು ಅತ್ಯಂತ ಯೋಜಿತ ರೀತಿಯಲ್ಲಿ ನಡೆಸಿದ್ದಾರೆ. ಮೊದಲಿಗೆ, ವೀರಸ್ವಾಮಿ ರೆಡ್ಡಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಲಯಕ್ಕೆ ಬರುವಂತೆ ಮಾಡಿದ್ದರು. ನಂತರ, ಪ್ರಶಾಂತ್ ರೆಡ್ಡಿಯನ್ನು ರಾಜಿ ಸಂಧಾನದ ಮಾತುಕತೆಗೆ ಆಮಿಷವೊಡ್ಡಿ, ತಂದೆ-ಮಗ ಇಬ್ಬರನ್ನೂ ನರ್ಸಮ್‌ಪೇಟೆಗೆ ಕರೆತಂದಿದ್ದರು. ಅಲ್ಲಿ, ಯೋಜನೆಯಂತೆ ಬಂದ ವೀರಸ್ವಾಮಿ ಮತ್ತು ಪ್ರಶಾಂತ್‌ರನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಯಿತು. ಈ ಸಂದರ್ಭದಲ್ಲಿ, ಮಾಧವರೆಡ್ಡಿ ತನ್ನ ದ್ವೇಷವನ್ನು ತೀರಿಸಿಕೊಳ್ಳಲು ವೀರಸ್ವಾಮಿಯ ಮುಖವನ್ನು ಕೊಚ್ಚಿ ಕೊಲೆಗೈದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನರ್ಸಮ್‌ಪೇಟೆ ಪೊಲೀಸರು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಕೊಲೆಯ ಹಿನ್ನೆಲೆಯನ್ನು ದೃಢಪಡಿಸಿದ್ದಾರೆ. ಕೊಲೆಯಾದ ವೀರಸ್ವಾಮಿ ರೆಡ್ಡಿ ಮತ್ತು ಪ್ರಶಾಂತ್ ರೆಡ್ಡಿ ಇಬ್ಬರೂ ಬಿಜೆಪಿ ಮುಖಂಡರಾಗಿದ್ದರು. ಪೊಲೀಸರ ತನಿಖೆಯ ಪ್ರಕಾರ, ಈ ಕೊಲೆಗೆ ಪ್ರಮುಖ ಕಾರಣ ಆಸ್ತಿ ವಿವಾದವೇ ಆಗಿದೆ.