ಆರ್‌ಸಿಬಿ ಗೆದ್ದ ಸಂಭ್ರಮದಲ್ಲಿ ಅಭಿಮಾನಿಗಳ ಹುಚ್ಚಾಟ: 260 ಡ್ರಿಂಕ್ & ಡ್ರೈವ್ ಕೇಸ್ ದಾಖಲು

Untitled design 2026 06 01T160944.723

ಬೆಂಗಳೂರು: ಐಪಿಎಲ್ 2026ರ ರೋಮಾಂಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಆದರೆ ಈ ಐತಿಹಾಸಿಕ ಗೆಲುವಿನ ಸಂಭ್ರಮ ಇಡೀ ಸಿಲಿಕಾನ್ ಸಿಟಿಯನ್ನು ತಲ್ಲೀನಗೊಳಿಸಿತ್ತು. ಈ ವಿಜಯೋತ್ಸವದ ನಡುವೆಯೇ ಕೆಲವು ಅಭಿಮಾನಿಗಳು ಮದ್ಯಪಾನ ಮಾಡಿ ವಾಹನ ಚಾಲನೆ (Drink & Drive) ಮಾಡಿದ್ದು, 260 ಡ್ರಿಂಕ್ & ಡ್ರೈವ್ ಕೇಸ್ ದಾಖಲಾಗಿದೆ.

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿಜಯ ಘೋಷಣೆಯಾಗುತ್ತಿದ್ದಂತೆ ಬೆಂಗಳೂರು ನಗರವು ಕೆಂಪು ಬಣ್ಣದಲ್ಲಿ ಮಿಂಚಿತು. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಾವಿರಾರು ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದರು. ಬೈಕ್ ರ್ಯಾಲಿಗಳು, ಪಟಾಕಿ ಸಿಡಿಸುವುದು, ಸಿಹಿ ಹಂಚುವುದು ಮತ್ತು “ಈ ಸಲ ಕಪ್ ನಮ್ದೇ” ಎಂಬ ಘೋಷಣೆಗಳು ಮೊಳಗಿಸಿದ್ದವು.

ಆದರೆ ಈ ಸಂಭ್ರಮದ ನಡುವೆ ಕೆಲವರು ಮದ್ಯಪಾನ ಮಾಡಿ ವಾಹನ ಚಲಾಯಿಸುವ ಮೂಲಕ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದಿದ್ದಾರೆ. ಬೆಂಗಳೂರು ಸಂಚಾರಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆ ನಡೆಸಿದರು.

ಬೀಟ್ ಅನಲೈಸರ್ ಮೂಲಕ ನಡೆದ ತಪಾಸಣೆಯಲ್ಲಿ ಒಂದೇ ರಾತ್ರಿ ಸುಮಾರು 260 ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದ ಚಾಲಕರಿಗೆ ತಕ್ಷಣ ದಂಡ ವಿಧಿಸಲಾಗಿದ್ದು, ಅವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಚಾಲಕರ ಲೈಸೆನ್ಸ್ ಅಮಾನತುಗೊಳಿಸುವ ಪ್ರಕ್ರಿಯೆಯೂ ಆರಂಭವಾಗಿದೆ ಎಂದು ಮಾಹಿತಿ ದೊರೆತಿದೆ.

ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಫ್ಲೈಓವರ್‌ಗಳನ್ನು ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮುಚ್ಚಿದ್ದು, ಅತಿವೇಗದ ಚಾಲನೆ, ವೀಲಿಂಗ್ ಹಾಗೂ ಅಕ್ರಮ ರೇಸಿಂಗ್‌ಗಳನ್ನು ತಡೆಯಲು ಕಠಿಣ ಕ್ರಮ ಕೈಗೊಂಡಿದೆ.

ಆರ್‌ಸಿಬಿ ವಿಜಯೋತ್ಸವದ ವೇಳೆ ಸಾವಿರಾರು ಅಭಿಮಾನಿಗಳು ಶಿಸ್ತಿನಿಂದ ಸಂಭ್ರಮಿಸಿದರೆ, ಕೆಲವರ ಅತಿರೇಕದ ವರ್ತನೆ  ಕಾನೂನು ಕ್ರಮಕ್ಕೆ ಕಾರಣವಾಯಿತು. ಪೊಲೀಸರು ನಗರದಾದ್ಯಂತ ಹದ್ದಿನ ಕಣ್ಣಿಟ್ಟು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Exit mobile version