ಬಸವಣ್ಣನ ಕುರಿತು ವಿವಾದಾತ್ಮಕ ಹೇಳಿಕೆ: ಕ್ಷಮೆ ಕೇಳಿದ ಲೇಖಕ ರವಿ ಹಂಜ್

Untitled Design (6)

ಬೆಂಗಳೂರು: ಜಗಜ್ಯೋತಿ ಬಸವೇಶ್ವರರು ಹಾಗೂ ‘ಬಸವ ಮಂಟಪ’ ಕೃತಿಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಸವ ಭಕ್ತರು ಮತ್ತು ವೀರಶೈವ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಲೇಖಕ ರವಿ ಹಂಜ್ ಇದೀಗ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ಸಮುದಾಯದ ಭಾವನೆಗಳಿಗೆ ನೋವಾಗಿದ್ದರೆ ಕ್ಷಮಿಸಬೇಕು ಎಂದು ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಬಸವ ಮಂಟಪ’ ಕೃತಿಯನ್ನು ಮರುಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಲೇಖಕ ರವಿ ಹಂಜ್ ನೀಡಿದ್ದ ಹೇಳಿಕೆಗಳು ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿದ್ದವು. ಸಂದರ್ಶನವೊಂದರಲ್ಲಿ ಜಗಜ್ಯೋತಿ ಬಸವೇಶ್ವರರ ಕುರಿತು ಅವರು ಆಡಿದ್ದ ಮಾತುಗಳು ಬಸವ ಭಕ್ತರು ಹಾಗೂ ವೀರಶೈವ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದವು. ಬಸವಣ್ಣನವರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧ ರವಿ ಹಂಜ್ ವಿರುದ್ಧ ದೂರು ದಾಖಲಾಗಿದ್ದು, ಎಫ್‌ಐಆರ್ ಕೂಡ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ವಿವಾದ ಮತ್ತಷ್ಟು ತೀವ್ರಗೊಂಡಿತ್ತು.

ಬಸವ ಭಕ್ತರ ಆಕ್ರೋಶಕ್ಕೆ ಮಣಿದ ರವಿ ಹಂಜ್!

ಬಸವಣ್ಣನವರ ಕುರಿತು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ರವಿ ಹಂಜ್ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಸಂದರ್ಶನದ ವೇಳೆ ತಾವು ಆಡಿದ ಮಾತುಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಗಳಿಂದ ವೀರಶೈವ ಲಿಂಗಾಯತ ಸಮುದಾಯದ ಬಂಧುಗಳಿಗೆ ನೋವಾಗಿದ್ದರೆ ಅದಕ್ಕೆ ಮನಃಪೂರ್ವಕವಾಗಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ಬಸವ ಭಕ್ತರು ಹಾಗೂ ಸಮುದಾಯದವರು ತಮ್ಮ ಮಾತುಗಳಿಂದ ಬೇಸರಗೊಂಡಿದ್ದರೆ ಕ್ಷಮಿಸಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ಹೇಳಿಕೆಗಳಿಂದ ಉಂಟಾಗಿರುವ ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ರವಿ ಹಂಜ್, ಸಮುದಾಯದ ಭಾವನೆಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಕ್ಷಮೆಯಾಚಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ‘ಬಸವ ಮಂಟಪ’ ಕೃತಿ ಮರುಬಿಡುಗಡೆ!

ಇನ್ನು ಕ್ಷಮೆಯಾಚನೆಯ ವಿಡಿಯೋದಲ್ಲಿ ರವಿ ಹಂಜ್ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ‘ಬಸವ ಮಂಟಪ’ ಕೃತಿಯನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮರುಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಎಲ್ಲರ ಆಶಯದಂತೆ ಈ ಪುಸ್ತಕವನ್ನು ಮತ್ತೆ ಜನರ ಮುಂದಿಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಈ ಮರುಬಿಡುಗಡೆ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಪುಸ್ತಕದ ಮರುಬಿಡುಗಡೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ವಿವಾದದ ನಡುವೆಯೇ ಪುಸ್ತಕವನ್ನು ಮತ್ತೆ ಬಿಡುಗಡೆ ಮಾಡುವ ಅವರ ನಿರ್ಧಾರ ಕುತೂಹಲ ಮೂಡಿಸಿದೆ.

ಕ್ಷಮೆ ಕೇಳಿದರೂ ಪುಸ್ತಕ ಬಿಡುಗಡೆ ನಿರ್ಧಾರಕ್ಕೆ ಚರ್ಚೆ!

ಒಂದೆಡೆ ಬಸವಣ್ಣನವರ ಕುರಿತು ನೀಡಿದ್ದ ಹೇಳಿಕೆಗಳಿಗೆ ಕ್ಷಮೆಯಾಚಿಸಿರುವ ರವಿ ಹಂಜ್, ಮತ್ತೊಂದೆಡೆ ವಿವಾದಕ್ಕೆ ಕಾರಣವಾಗಿರುವ ‘ಬಸವ ಮಂಟಪ’ ಕೃತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಅವರ ಕ್ಷಮೆಯಾಚನೆಯಿಂದ ವಿವಾದಕ್ಕೆ ತೆರೆ ಬೀಳುತ್ತದೆಯೇ ಅಥವಾ ಪುಸ್ತಕದ ಮರುಬಿಡುಗಡೆಯಿಂದ ಮತ್ತೆ ಚರ್ಚೆ ತೀವ್ರಗೊಳ್ಳುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

 

Exit mobile version