ಕರ್ನಾಟಕದ ಹೊಸ ಸರ್ಕಾರ ರಚನೆಯಾಗಿ ಕೇವಲ 48 ಗಂಟೆಗಳಲ್ಲೇ ಅಸಮಾಧಾನದ ಬಾಂಬ್ ಸ್ಫೋಟಗೊಂಡಿದೆ. ಬೆಂಗಳೂರಿನ ಪ್ರಬಲ ರಾಜಕಾರಣಿ ಮತ್ತು ಸೌಮ್ಯ ಸ್ವಭಾವದ ನಾಯಕ ಎಂದೇ ಹೆಸರಾಗಿರುವ ರಾಮಲಿಂಗಾರೆಡ್ಡಿ ಅವರು ತಮಗೆ ನೀಡಲಾದ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ನಿಮ್ಮ ಕೊಟ್ಟ ಸ್ಥಾನ ನನಗೆ ಬೇಡ, ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲಾಗುವುದಿಲ್ಲ” ಎಂದು ಹೇಳಿ ಅವರು ಸಚಿವ ಸ್ಥಾನ ತೊರೆದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆ ಆಸೆಗೆ ರಾಜೀನಾಮೆ
ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಅಭಿವೃದ್ಧಿ ಖಾತೆ ತಮಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಜಲಸಂಪನ್ಮೂಲ ಸಚಿವ ಸ್ಥಾನ ನೀಡಲಾಯಿತು. ಇದರಿಂದ ಅಸಮಾಧಾನಗೊಂಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಸರ್ಕಾರದಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಸಿಎಂ ಡಿಕೆ ಶಿವಕುಮಾರ್ ಮನವೊಲಿಕೆಯ ಕಸರತ್ತು
ರಾಜೀನಾಮೆ ಬಳಿಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ತೀವ್ರ ಕಸರತ್ತು ನಡೆಸಿದ್ದಾರೆ. ಮಾತುಕತೆ ಮೂಲಕ ಅವರನ್ನು ಸಮಾಧಾನಪಡಿಸುವಂತೆ ಹೈಕಮಾಂಡ್ ಸಿಎಂಗೆ ಸೂಚನೆ ನೀಡಿದೆ. ಆದರೆ ಹೈಕಮಾಂಡ್ ಸ್ವತಃ ಒಂದು ಸ್ಪಷ್ಟ ನಿಲುವನ್ನು ತಳೆದಿದೆ.
ಹೈಕಮಾಂಡ್ ಕಡ್ಡಾಯ ನಿಲುವು
ಹೈಕಮಾಂಡ್ ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆ ಮಾಡಲು ನಿರಾಕರಿಸಿದೆ. ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಸಾಧ್ಯತೆಯನ್ನು ಸಂಪೂರ್ಣ ತಳ್ಳಿಹಾಕಲಾಗಿದೆ. ಹಾಗೆಯೇ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾಯಿಸಲೂ ಹೈಕಮಾಂಡ್ ಒಪ್ಪುತ್ತಿಲ್ಲ. ಹೈಕಮಾಂಡ್ ಕಡ್ಡಿ ಮುರಿದಂತೆ ಈ ನಿಲುವನ್ನು ಪ್ರಕಟಿಸಿದೆ.
ಏಕೆ ಹೈಕಮಾಂಡ್ ಈ ನಿರ್ಧಾರ?
ಮೂಲಗಳ ಪ್ರಕಾರ, ಒಬ್ಬರ ಬೇಡಿಕೆಗೆ ಸ್ಪಂದಿಸಿದರೆ ಇತರ ಸಚಿವರು ಕೂಡ ತಮ್ಮ ಖಾತೆ ಬದಲಾಯಿಸುವಂತೆ ಒತ್ತಡ ಹೇರಬಹುದು. ಇದೀಗ ಮಾತ್ರವಲ್ಲದೆ ಮುಂದಿನ ಸಂಪುಟ ವಿಸ್ತರಣೆಯ ವೇಳೆಯೂ ಬೇಡಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿಯೇ ಹೈಕಮಾಂಡ್ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆಗೆ ಒಪ್ಪಿಗೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.
