ರಾಯಚೂರು, ಏಪ್ರಿಲ್ 27: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರ ಮುಖ್ಯ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸವೇಶ್ವರ ರಥೋತ್ಸವ ಮುಗಿಸಿಕೊಂಡು ಗ್ರಾಮಕ್ಕೆ ತೆರಳುತ್ತಿದ್ದ ನಾಲ್ವರು ಪ್ರಯಾಣಿಕರಿದ್ದ ಬೈಕ್‌ಗೆ ಕಂಕರ್ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಂಕರ್ ಟಿಪ್ಪರ್ ಚಕ್ರಕ್ಕೆ ಸಿಲುಕಿ ದೇಹಗಳೇ ಛಿದ್ರ ಛಿದ್ರವಾಗಿವೆ..
ಮೃತರು ಮತ್ತು ಗಾಯಾಳುಗಳ ವಿವರ
ಅಪಘಾತದಲ್ಲಿ ಮೃತಪಟ್ಟವರನ್ನು ಶಾಖಾಪುರ ಗ್ರಾಮದ ಆಂಜಿನಯ್ಯ ನಾಯಕ (37) ಮತ್ತು 10 ವರ್ಷದ ಬಾಲಕಿ ಅರ್ಚನಾ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಶ್ವೇತಾ (19) ಅವರ ಕಾಲು ತೀವ್ರವಾಗಿ ಕಟ್ ಆಗಿದ್ದು, ಲಕ್ಷ್ಮೀ (22) ಅವರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರಿಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆ ಮುಂದುವರೆಸಿದ್ದಾರೆ.
ಘಟನೆ ಹೇಗೆ ಸಂಭವಿಸಿತು?
ನಿನ್ನೆ ಸಂಜೆ ಅತ್ತನೂರು ದಿಡ್ಡಿಯಲ್ಲಿ ನಡೆದ ಬಸವೇಶ್ವರ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮಕ್ಕೆ ಮೃತರು ಮತ್ತು ಗಾಯಾಳುಗಳು ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಮೃತ ಆಂಜಿನಯ್ಯ ನಾಯಕ ಅವರು ಒಂದೇ ಬೈಕ್‌ನಲ್ಲಿ ಅರ್ಚನಾ, ಶ್ವೇತಾ ಮತ್ತು ಲಕ್ಷ್ಮೀ ಅವರೊಂದಿಗೆ ಶಾಖಾಪುರಕ್ಕೆ ಮರಳುತ್ತಿದ್ದರು. ಮಾರ್ಗ ಮಧ್ಯೆ ಶಾಖಾಪುರ ಮುಖ್ಯ ರಸ್ತೆಯಲ್ಲಿ ವೇಗವಾಗಿ ಬಂದ ಕಂಕರ್ ಟಿಪ್ಪರ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟಿಪ್ಪರ್ ಚಕ್ರಕ್ಕೆ ಸಿಲುಕಿದ್ದಾರೆ. ಲಾರಿಯ ಚಕ್ರಗಳಿಗೆ ಸಿಲುಕಿದ ಪರಿಣಾಮ ದೇಹಗಳೇ ಛಿದ್ರಗೊಂಡಿವೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿರವಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
