ರಾಯಚೂರು, ಮಾ.28: ಸಾಮಾನ್ಯ ಜ್ವರಕ್ಕೆ ನಕಲಿ ವೈದ್ಯನ ಬಳಿ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿಸಿದ್ದಾರೆ. ನಕಲಿ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನು ಘಟನೆ?
ಮೃತಪಟ್ಟ ಬಾಲಕಿ ಸಿಂಧೂ (13) ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಢ ಗ್ರಾಮದ ನಿವಾಸಿ. ಇವರು ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 26ರಂದು ಸಿಂಧೂಗೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯವಾಗಿ ಆರ್.ಎಂ.ಪಿ (ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್) ಎಂದು ಕರೆಸಿಕೊಳ್ಳುವ ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ಅವರ ಬಳಿ ಚಿಕಿತ್ಸೆಗೆಂದು ಪೋಷಕರು ಮಗಳನ್ನು ಕರೆದೊಯ್ದಿದ್ದರು.
ಸಿಂಧೂಗೆ ನಕಲಿ ವೈದ್ಯ ಉತ್ತಮ ಕುಮಾರ್ ಚಿಕಿತ್ಸೆ ನೀಡಿ ಇಂಜೆಕ್ಷನ್ ಹಾಕಿದ್ದರು. ಇಂಜೆಕ್ಷನ್ ನೀಡಿದ ಕೂಡಲೇ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ. ಬಾಲಕಿ ಸಿಂಧೂ ಚಿಕಿತ್ಸೆ ಪಡೆದ ನಂತರ ತನ್ನ ಪರೀಕ್ಷೆಗೆ ತೆರಳಿದ್ದಳು. ಆದರೆ, ರಾತ್ರಿ ಹೊತ್ತಿಗೆ ಸಿಂಧೂನ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡವು. ಜೊತೆಗೆ ತೀವ್ರ ನೋವಿನಿಂದ ಅವಳು ನರಳಾಡಲು ಪ್ರಾರಂಭಿಸಿದಳು.
ಆಸ್ಪತ್ರೆಗೆ ದಾಖಲು, ಸಾವು
ಕೂಡಲೇ ಪೋಷಕರು ಮಗಳನ್ನು ಮಾನ್ವಿಯ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತಾದರೂ, ಸಿಂಧೂನ ಸ್ಥಿತಿ ಗಂಭೀರವಾಗಿತ್ತು. ಕೆಲವೇ ಕ್ಷಣಗಳಲ್ಲಿ ವೈದ್ಯರು ಅವಳನ್ನು ಮೃತಪಟ್ಟಿರುವುದಾಗಿ ತಿಳಿಸಿದರು. ಬಳಿಕ ಮೃತದೇಹವನ್ನು ಕವಿತಾಳ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಅಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿ, ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.
ಪೋಷಕರ ಆರೋಪ, ಪೊಲೀಸರ ಕ್ರಮ:
ಮಗಳ ಸಾವಿಗೆ ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ಅವರೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಚಿಕಿತ್ಸೆ ನೀಡಿದ ರೀತಿ, ನೀಡಿದ ಇಂಜೆಕ್ಷನ್ ಅನುಚಿತವಾಗಿದ್ದು ಇದರಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
