ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಟೀಕಿಸಿದ ಅವರು, ಡಿಕೆ ಶಿವಕುಮಾರ್ ಅಂದರೆ ರಾಜಕೀಯ ಅಷ್ಟೇ. ಅವರಿಗೆ ಆಡಳಿತ ಅನ್ನೋದೇ ಗೊತ್ತಿಲ್ಲ. ಜನರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕನಿಷ್ಠ ಆಡಳಿತ ನಡೆಸುವ ಅನುಭವ ಮತ್ತು ತಿಳುವಳಿಕೆ ಇತ್ತು. ಆದರೆ ಡಿ.ಕೆ. ಶಿವಕುಮಾರ್ ಅವರ ಜೀವನವೇ ರಾಜಕಾರಣದಲ್ಲಿ ಕಳೆದಿದ್ದು, ಆಡಳಿತ ನಡೆಸುವ ಸಾಮರ್ಥ್ಯ ಅವರಲ್ಲಿ ಕಾಣಿಸುತ್ತಿಲ್ಲ ಎಂದರು. ಇದೇ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಈಗಾಗಲೇ ಹಲವು ಮಾಹಿತಿಗಳು ಪಕ್ಷದ ಗಮನಕ್ಕೆ ಬಂದಿದೆ. ಯಾರು ಎಲ್ಲಿದ್ದರು, ಯಾರೊಂದಿಗೆ ಸಂಪರ್ಕದಲ್ಲಿದ್ದರು, ಯಾರಿಂದ ಕರೆಗಳು ಬಂದಿದ್ದವು ಎಂಬ ಎಲ್ಲಾ ಮಾಹಿತಿಗಳೂ ಲಭ್ಯವಾಗುತ್ತಿದ್ದು, ಸಿ.ಟಿ. ರವಿ ನೇತೃತ್ವದಲ್ಲಿ ರಚಿಸಲಾದ ತ್ರಿಸದಸ್ಯ ಸಮಿತಿ ಸತ್ಯಾಸತ್ಯತೆಯನ್ನು ಹೊರತರುವ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಪಕ್ಷದ ಬೆನ್ನಿಗೆ ಚೂರಿ ಹಾಕಿದವರು ಯಾರು ಎಂಬುದು ಬಹಿರಂಗವಾಗಲಿದೆ. ಈ ಪ್ರಕರಣದಲ್ಲಿ ಹಣದ ವ್ಯವಹಾರ ನಡೆದಿರುವ ಶಂಕೆ ಇದ್ದು, ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ಹಾಗೂ ಅನುದಾನದ ವಿಚಾರಗಳು ತನಿಖೆಯಲ್ಲಿ ಬೆಳಕಿಗೆ ಬರಲಿವೆ. ಅಡ್ಡಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಶಾಸಕರು ಕರೆ ಮಾಡಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಸತ್ಯ ಹೊರಬರುವ ದಿನ ದೂರವಿಲ್ಲ. ಇದನ್ನು ಬಹಳ ದಿನಗಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಈಗಾಗಲೇ ಕೇಂದ್ರ ನಾಯಕರಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ವಾರ ಹೈಕಮಾಂಡ್‌ಗೆ ಸಂಪೂರ್ಣ ವರದಿ ಸಲ್ಲಿಸಲಾಗುವುದು. ಈ ಬೆಳವಣಿಗೆ ಹಿಂದೆ ಯಾರ ಕೈವಾಡ ಇದೆ ಎಂಬುದು ತನಿಖೆಯಿಂದ ಬಹಿರಂಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೂ ಮಾತನಾಡಿದ್ದಾಗಿ ತಿಳಿಸಿದ ಅಶೋಕ್, ಈ ಬೆಳವಣಿಗೆಯಿಂದ ಕುಮಾರಸ್ವಾಮಿ ಕೂಡ ಆಘಾತಕ್ಕೊಳಗಾಗಿದ್ದಾರೆ. ಅಧಿಕಾರ ಮತ್ತು ಹಣದ ಪ್ರಭಾವದಿಂದ ಈ ಕೃತ್ಯ ನಡೆದಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರದಲ್ಲೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆರ್. ಅಶೋಕ್, ಈಗಾಗಲೇ ಹಲವೆಡೆ ಫಲಾನುಭವಿಗಳನ್ನು ಕಡಿತಗೊಳಿಸುವ ಕೆಲಸ ನಡೆಯುತ್ತಿದೆ. ರೇಷನ್ ಕಾರ್ಡ್ ಸ್ಥಗಿತದಿಂದ ಲಕ್ಷಾಂತರ ಜನರು ಯೋಜನೆಗಳಿಂದ ಹೊರಗುಳಿದಿದ್ದಾರೆ. ಖಜಾನೆ ಖಾಲಿಯಾಗಿರುವ ಕಾರಣ ಸರ್ಕಾರಕ್ಕೆ ಪಿಂಚಣಿ ನೀಡುವ ಸಾಮರ್ಥ್ಯವೂ ಇಲ್ಲದಂತಾಗಿದೆ. ಬರಗಾಲದ ಪರಿಸ್ಥಿತಿ ಎದುರಾಗುತ್ತಿದ್ದರೂ ರೈತರಿಗೆ ನೆರವು ನೀಡಲು ಸರ್ಕಾರದ ಬಳಿ ಹಣವಿಲ್ಲ. ಇಂತಹ ಸಂದರ್ಭದಲ್ಲಿ ಕೃಷಿ ಭೂಮಿಯನ್ನು ಲೇಔಟ್‌ಗಳಾಗಿ ಪರಿವರ್ತಿಸಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.
