ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಕೊಲೆ ಪ್ರಕರಣದ ವಿಚಾರಣೆಯಲ್ಲಿ ನಟ ದರ್ಶನ್‌ಗೆ ಸಂಬಂಧಿಸಿದ ಎರಡು ಮಹತ್ವದ ಬೆಳವಣಿಗೆಗಳು ಕೂಡಾ ಇಂದು ಗುರುವಾರ ನಡೆದಿವೆ. ಒಂದು ಕಡೆ ಸೆಷನ್ಸ್ ಕೋರ್ಟ್‌ನಲ್ಲಿ ಖುದ್ದು ಹಾಜರಾತಿಗೆ ಸಂಬಂಧಿಸಿದ ಅರ್ಜಿಯ ಆದೇಶ ಮುಂದೂಡಿಕೆಯಾಗಿದ್ದರೆ, ಮತ್ತೊಂದೆಡೆ ಹೈಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ವಿಚಾರದಲ್ಲಿ ದರ್ಶನ್ ಪರ ಅರ್ಜಿ ತಿರಸ್ಕೃತವಾಗಿದೆ.
ಪ್ರಕರಣದ ಆರೋಪಿ ಪ್ರದೂಷ್ ತಾನು ಮಾಫಿ ಸಾಕ್ಷಿ (Approver) ಆಗಲು ಅವಕಾಶ ನೀಡುವಂತೆ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಗೆ ಸಹ ಆರೋಪಿಗಳಿಗೂ ಆಕ್ಷೇಪಣೆ ಸಲ್ಲಿಸುವ ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ನಾಗಪ್ರಸನ್ನ ಅವರನ್ನೊಳಗೊಂಡ ಪೀಠ, ಈ ಹಂತದಲ್ಲಿ ಸಹ ಆರೋಪಿಗಳಿಗೆ ವಾದ ಮಂಡಿಸುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿತು.
ನ್ಯಾಯಪೀಠದ ಅಭಿಪ್ರಾಯದಂತೆ, ಮಾಫಿ ಸಾಕ್ಷಿಗೆ ಅನುಮತಿ ನೀಡುವ ಪ್ರಾಥಮಿಕ ಹಂತದಲ್ಲಿ ಇತರೆ ಆರೋಪಿಗಳು ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಕ್ಷಮೆ ನೀಡಿದ ನಂತರ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಲೋಪ ಕಂಡುಬಂದರೆ ಮಾತ್ರ ಅದನ್ನು ಪ್ರಶ್ನಿಸಬಹುದಾಗಿದೆ ಎಂದು ಕೋರ್ಟ್ ತಿಳಿಸಿತು. ಈ ಸಂಬಂಧ ಹಿಂದಿನ ವಿನಯ್ ಕುಲಕರ್ಣಿ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನೂ ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದು ನ್ಯಾಯಪೀಠ ಉಲ್ಲೇಖಿಸಿತು.
ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಪ್ರದೂಷ್ ಈಗಾಗಲೇ ಎರಡೂವರೆ ವರ್ಷಗಳಿಂದ ವಿಚಾರಣೆ ಎದುರಿಸುತ್ತಿದ್ದು, ಪ್ರಕರಣದ ಕೃತ್ಯದಲ್ಲಿ ಭಾಗಿಯಾಗಿರಬಹುದಾದ ಕಾರಣ ಇತರೆ ಆರೋಪಿಗಳ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದು ವಾದ ಮಂಡಿಸಿದರು. ಆದರೆ ವಾದವನ್ನು ಸ್ವೀಕರಿಸದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.
ಇನ್ನೊಂದೆಡೆ, ದರ್ಶನ್ ಖುದ್ದು ಸೆಷನ್ಸ್ ಕೋರ್ಟ್‌ಗೆ ಹಾಜರಾಗಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದುವರಿಸಿದೆ. ದರ್ಶನ್ ಪರ ವಕೀಲರು ಮತ್ತು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ, ಈ ಕುರಿತು ಸೋಮವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
ಹೀಗಾಗಿ ಪ್ರಕರಣದಲ್ಲಿ ಸದ್ಯ ಎಲ್ಲರ ಗಮನ ಸೆಷನ್ಸ್ ಕೋರ್ಟ್‌ನ ಸೋಮವಾರದ ತೀರ್ಪಿನತ್ತ ನೆಟ್ಟಿದ್ದು, ಖುದ್ದು ಹಾಜರಾತಿಗೆ ಅನುಮತಿ ಸಿಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
