ಹಾವೇರಿ: ಹಣ ಕಟ್ಟದ ಕಾರಣಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನಿರಾಕರಿಸಿ, ಆಕೆಯ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದ್ದ ಶಿಕ್ಷಕಿಗೆ ಶಿಕ್ಷಣ ಇಲಾಖೆ ಭಾರೀ ಶಾಕ್ ನೀಡಿದೆ. ಅಮಾನವೀಯವಾಗಿ ವರ್ತಿಸಿದ ಆ ಶಿಕ್ಷಕಿಯನ್ನು ಅಮಾನತು ಗೊಳಿಸುವ ಮೂಲಕ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬಿಎಜೆಎಸ್ಎಸ್ (BAJSS) ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ರಾಣೇಬೆನ್ನೂರಿನ ಬಿಎಜೆಎಸ್ಎಸ್ (BAJSS) ಕಾಲೇಜಿನ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ಫೆಬ್ರವರಿ 28ರಂದು ಕನ್ನಡ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ಪರೀಕ್ಷೆ ಬರೆಯಲು ಅಗತ್ಯವಿರುವ ಹಾಲ್ ಟಿಕೆಟ್ ನೀಡಲು ಶಾಲಾ ಸಿಬ್ಬಂದಿ ನಿರಾಕರಿಸಿದ್ದರು. ಶಾಲೆಯ ವಿಜ್ಞಾನ ಶಿಕ್ಷಕಿ ಸುನೀತಾ ಡಿ.ಬಿ. ಅವರು ಕಾಲೇಜು ಆಡಳಿತ ಮಂಡಳಿಯ ಪರವಾಗಿ ನಿಂತು, ವಿದ್ಯಾರ್ಥಿನಿಗೆ 30 ಸಾವಿರ ರೂಪಾಯಿ ಫೀಸ್ ಬಾಕಿಯಿದೆ ಎಂದು ಆರೋಪಿಸಿ ಹಾಲ್ ಟಿಕೆಟ್ ನೀಡಲು ನಿರಾಕರಿಸಿದರು.
ಇದಷ್ಟೇ ಅಲ್ಲದೆ, “ಎಲ್ಲಾ ಕಾಲೇಜಿನವರೂ ಉಚಿತವಾಗಿ ಕಲಿಸ್ತಾರಾ?” ಎಂದು ಅವಮಾನಕಾರಿ ಶೈಲಿಯಲ್ಲಿ ಮಾತನಾಡಿದರೆಂಬ ಆರೋಪವೂ ಕೇಳಿಬಂದಿದೆ. ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ಸಂಕಷ್ಟಕ್ಕೆ ಸಿಲುಕಿದರು.
ಈ ಘಟನೆ ತಿಳಿದು ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಅವರು ವಿದ್ಯಾರ್ಥಿನಿಯ ಪರವಾಗಿ ಧ್ವನಿ ಎತ್ತಿದರು. ಶಿಕ್ಷಣ ಸಂಸ್ಥೆಗಳು ಹಣದ ನೆಪದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಪಣಕ್ಕಿಡಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯ ಪೋಷಕರು ತುರ್ತು ಪರಿಸ್ಥಿತಿಯಲ್ಲಿ ಬೈಕ್‌ನ್ನು ಅಡಮಾನ ಇಟ್ಟು ಹಣ ಸಂಗ್ರಹಿಸಿದ ಬಳಿಕವೇ ಹಾಲ್ ಟಿಕೆಟ್ ನೀಡಲಾಗಿದೆಯೆಂಬ ಮಾಹಿತಿ ಹೊರಬಂದಿದೆ.
ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿತು. ಉಪನಿರ್ದೇಶಕ ಮೋಹನ್ ದಂಡಿನ ಅವರು ಪ್ರಕರಣದ ಕುರಿತು ತನಿಖೆ ನಡೆಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಕರ್ತವ್ಯ ಲೋಪ ಮತ್ತು ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಆರೋಪದ ಮೇಲೆ ಶಿಕ್ಷಕಿ ಸುನೀತಾ ಡಿ.ಬಿ. ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಣೇಬೆನ್ನೂರು ಬಿಇಒ ಶ್ಯಾಮ್ ಸುಂದರ್ ಅಡಿಗಾ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.