ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಉದ್ಯಮಿ ರಾಯ್ ಅವರು ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ಘಟನಾ ಸ್ಥಳದಲ್ಲಿ ಐಟಿ ಅಧಿಕಾರಿಗಳ ಹೊರತಾಗಿ ಬೇರೆ ಯಾರಾದರೂ ಇದ್ದರೇ ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಮೂರು ದಿನಗಳ ಕಾಲ ನಡೆದಿದ್ದ ಐಟಿ ವಿಚಾರಣೆ
ಪೊಲೀಸ್ ಆಯುಕ್ತರ ಮಾಹಿತಿಯಂತೆ, ಕೇರಳದಿಂದ ಬಂದಿದ್ದ ಐಟಿ ಅಧಿಕಾರಿಗಳ ವಿಶೇಷ ತಂಡವು ಕಳೆದ ಮೂರು ದಿನಗಳಿಂದ ಸಿ.ಜೆ. ರಾಯ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿತ್ತು. ಇಂದು ಮಧ್ಯಾಹ್ನ ಸುಮಾರು 3:00 ರಿಂದ 3:15 ರ ಅವಧಿಯಲ್ಲಿ, ವಿಚಾರಣೆಯ ಒತ್ತಡದ ನಡುವೆಯೇ ರಾಯ್ ಅವರು ತಮ್ಮ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಈ ಘಟನೆ ಸಂಭವಿಸಿದ ತಕ್ಷಣ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಘಟನಾ ಸ್ಥಳದಲ್ಲಿ ನಡೆದಿದ್ದೇನು?
ಲಭ್ಯವಿರುವ ಮಾಹಿತಿಯಂತೆ, ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ಸಿ.ಜೆ. ರಾಯ್ ಅವರು ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಮೊದಲ ಸುತ್ತು ಗುಂಡು ಹಾರಿದ ತಕ್ಷಣ ಎಚ್ಚೆತ್ತ ಐಟಿ ಅಧಿಕಾರಿಗಳು ರಾಯ್ ಅವರ ಕೈಯಿಂದ ಗನ್ ಕಿತ್ತುಕೊಂಡು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಗುಂಡಿನ ಗಾಯ ತೀವ್ರವಾಗಿದ್ದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹೆಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ.
ಸೋಕೋ ಮತ್ತು ಬ್ಯಾಲೆಸ್ಟಿಕ್ ಟೀಂ ತನಿಖೆ
ಈ ಆತ್ಮಹತ್ಯೆಗೆ ಬಳಕೆಯಾದ ಪಿಸ್ತೂಲ್ ಯಾವುದು ? ಅದು ಪರವಾನಗಿ ಹೊಂದಿದೆಯೇ ಅಥವಾ ಇಲ್ಲವೇ ? ಎಂಬ ಬಗ್ಗೆ ಬ್ಯಾಲೆಸ್ಟಿಕ್ ತಜ್ಞರು ಪರೀಕ್ಷೆ ನಡೆಸುತ್ತಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಐಟಿ ದಾಳಿ ವೇಳೆ ನಿಯಮ ಬಾಹಿರವಾಗಿ ಬೇರೆ ಯಾರಾದರೂ ಅಧಿಕಾರಿಗಳ ಜೊತೆ ಸೇರಿಕೊಂಡಿದ್ದರೇ ಎಂಬ ಬಗ್ಗೆಯೂ ನಾವು ಪರಿಶೀಲಿಸುತ್ತಿದ್ದೇವೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದ್ದಾರೆ.
ಐಟಿ ಇಲಾಖೆಯ ಪದೇ ಪದೇ ದಾಳಿ ಮತ್ತು ವಿಚಾರಣೆಯು ರಾಯ್ ಅವರ ಮಾನಸಿಕ ಸ್ಥಿತಿಯ ಮೇಲೆ ಯಾವ ರೀತಿ ಪರಿಣಾಮ ಬೀರಿತ್ತು ಎಂಬುದು ಪೊಲೀಸರ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿವೆ.
