ಪಿಜಿಗಳಲ್ಲೂ ಆಹಾರ ಸುರಕ್ಷತಾ ತಪಾಸಣೆ: ಅಧಿಕಾರಿಗಳಿಗೆ ಸಚಿವ ಯು.ಟಿ. ಖಾದರ್ ಸೂಚನೆ

WhatsApp Image 2026 09 02 at 1.22.11 PM

ಬೆಂಗಳೂರು: ಹೋಟೆಲ್‌, ರೆಸ್ಟೋರೆಂಟ್‌ಗಳು ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ವಿರುದ್ಧ ಕ್ರಮ ತೀವ್ರಗೊಂಡಿರುವ ಬೆನ್ನಲ್ಲೇ, ಇದೀಗ ಪಿಜಿಗಳಲ್ಲೂ ತಪಾಸಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಪೇಯಿಂಗ್ ಗೆಸ್ಟ್‌ (PG) ಕೇಂದ್ರಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ನಿಯಮಗಳ ಪಾಲನೆ ಪರಿಶೀಲಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆಹಾರ ಮತ್ತು ಔಷಧಿ ಆಡಳಿತ (FDA) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯದ ಆಹಾರ ಸುರಕ್ಷತಾ ಇಲಾಖೆ ಹೋಟೆಲ್‌, ರೆಸ್ಟೋರೆಂಟ್‌, ಬೇಕರಿ ಹಾಗೂ ವಿವಿಧ ಆಹಾರ ತಯಾರಿಕಾ ಘಟಕಗಳ ಮೇಲೆ ನಿರಂತರ ತಪಾಸಣೆ ನಡೆಸುತ್ತಿದೆ. ನಿಯಮಗಳನ್ನು ಪಾಲಿಸದಿರುವುದು, ಸ್ವಚ್ಛತೆ ಕಾಪಾಡದಿರುವುದು ಸೇರಿದಂತೆ ಹಲವು ಲೋಪಗಳು ಕಂಡುಬಂದಿರುವ ಕಡೆಗಳಲ್ಲಿ ಅಧಿಕಾರಿಗಳು ದಂಡ ವಿಧಿಸುವುದು ಸೇರಿದಂತೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಇದೀಗ ಪಿಜಿಗಳತ್ತ ಅಧಿಕಾರಿಗಳ ಗಮನ ಹರಿದಿದೆ. ಪಿಜಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ಸಾವಿರಾರು ಮಂದಿ ಪ್ರತಿದಿನ ಅಲ್ಲಿಯೇ ಸಿದ್ಧಪಡಿಸುವ ಆಹಾರವನ್ನು ಅವಲಂಬಿಸಿದ್ದಾರೆ. ಆಹಾರದ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ, ಆಹಾರ ಸಂಗ್ರಹಿಸುವ ವಿಧಾನ ಹಾಗೂ ಸುರಕ್ಷತಾ ನಿಯಮಗಳ ಪಾಲನೆ ಕುರಿತು ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ತಪಾಸಣೆಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಆಹಾರ ಸುರಕ್ಷತಾ ಇಲಾಖೆಗೆ ಸಾರ್ವಜನಿಕರಿಂದ ಬಂದಿರುವ ದೂರುಗಳು ಹಾಗೂ ಇಲಾಖೆಯ ಕ್ಯೂಆರ್‌ ಕೋಡ್ ವ್ಯವಸ್ಥೆಯ ಮೂಲಕ ದಾಖಲಾಗಿರುವ ದೂರುಗಳನ್ನು ಆಧರಿಸಿ ಪಿಜಿಗಳ ಮೇಲೆ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಅಗತ್ಯ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಪಿಜಿಗಳಲ್ಲಿ ಆಹಾರ ತಯಾರಿಸುವ ಸ್ಥಳದ ಸ್ವಚ್ಛತೆ, ಬಳಸುವ ಕಚ್ಚಾ ವಸ್ತುಗಳ ಗುಣಮಟ್ಟ, ಆಹಾರವನ್ನು ಸಂಗ್ರಹಿಸುವ ವಿಧಾನ, ಅಡುಗೆ ಸಿಬ್ಬಂದಿಯ ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ.

ಪಿಜಿಗಳ ತಪಾಸಣೆ ಪೂರ್ಣಗೊಂಡ ಬಳಿಕ ಸರ್ಕಾರಿ ಹಾಸ್ಟೆಲ್‌ಗಳಲ್ಲೂ ಆಹಾರ ಸುರಕ್ಷತಾ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ದೊರೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.

ಆಹಾರದಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಈ ತಪಾಸಣಾ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Exit mobile version