ಪೆಟ್ರೋಲ್-ಡೀಸೆಲ್ ದರ ಏರಿಕೆ ಬೆನ್ನಲ್ಲೇ ಗಗನಕ್ಕೇರಿದ ದಿನಸಿ ಬೆಲೆ

Untitled design 2026 05 17T182050.125

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ರಾಜ್ಯಾದ್ಯಂತ ದಿನಸಿ ವಸ್ತುಗಳ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮಧ್ಯಮ ವರ್ಗ ಹಾಗೂ ಕೂಲಿ ಕಾರ್ಮಿಕರ ಬದುಕು ಮತ್ತಷ್ಟು ದುಬಾರಿಯಾಗಿದೆ. ಅಕ್ಕಿ, ತೊಗರಿಬೇಳೆ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ, ಕಚ್ಚಾ ತೈಲದ ದರ ಏರಿಕೆ, ವಿದೇಶಿ ವಿನಿಮಯದ ಕೊರತೆ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳ ಪರಿಣಾಮ ಭಾರತದಲ್ಲಿಯೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ ಸುಮಾರು 3 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಅದರ ನೇರ ಪರಿಣಾಮ ಸಾರಿಗೆ ವೆಚ್ಚದ ಮೇಲೆ ಬಿದ್ದಿದೆ. ಸಾರಿಗೆ ದರ ಏರಿಕೆಯಿಂದ ಇದೀಗ ದಿನಸಿ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಕಳೆದ ಎರಡು ವಾರಗಳಿಂದ ಅಕ್ಕಿ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಸಾಮಾನ್ಯ ಹಾಗೂ ಪ್ರೀಮಿಯಂ ಅಕ್ಕಿಗಳ ದರದಲ್ಲಿ 3 ರೂಪಾಯಿಯಿಂದ 10 ರೂಪಾಯಿವರೆಗೆ ಏರಿಕೆ ಕಂಡುಬಂದಿದೆ. ರೀಟೇಲ್ ಮಾರುಕಟ್ಟೆಗೆ ತಲುಪುವಷ್ಟರಲ್ಲಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

26 ಕೆಜಿ ಅಕ್ಕಿ ಚೀಲದ ದರವು 100ರಿಂದ 200 ರೂಪಾಯಿವರೆಗೆ ಏರಿಕೆಯಾಗಿದೆ. ಮಳೆ ಕೊರತೆ, ಬೆಳೆ ಉತ್ಪಾದನೆ ಕುಸಿತ, ಸಾರಿಗೆ ವೆಚ್ಚ ಹಾಗೂ ಗೋದಾಮು ಖರ್ಚಿನ ಹೆಚ್ಚಳವೂ ದರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

ಪ್ರಮುಖ ಅಕ್ಕಿ ತಳಿಗಳ ಬೆಲೆಯಲ್ಲಿ ಕೂಡ ಭಾರೀ ಏರಿಕೆ ದಾಖಲಾಗಿದೆ. ಸೋನಾ ಮಸೂರಿ ಸ್ಟೀಮ್ ಅಕ್ಕಿ ಕಳೆದ ವಾರ ಕೆಜಿಗೆ 69 ರೂಪಾಯಿದ್ದರೆ, ಈ ವಾರ 78 ರೂಪಾಯಿಗೆ ಏರಿಕೆಯಾಗಿದೆ. RNR ಸ್ಟೀಮ್ ಅಕ್ಕಿ 69 ರೂಪಾಯಿಯಿಂದ 79 ರೂಪಾಯಿಗೆ ತಲುಪಿದೆ. RNR ರಾ ರೈಸ್ ದರ 66 ರೂಪಾಯಿಯಿಂದ 76 ರೂಪಾಯಿಗೆ ಏರಿಕೆಯಾಗಿದೆ. ಸೋನಾ ಮಸೂರಿ ರಾ ರೈಸ್ 58 ರೂಪಾಯಿಯಿಂದ 65 ರೂಪಾಯಿಗೆ ಏರಿದರೆ, ಕೋಲಂ ರಾ ರೈಸ್ ದರ 69 ರೂಪಾಯಿಯಿಂದ 80 ರೂಪಾಯಿವರೆಗೆ ಜಿಗಿದಿದೆ.

ಅಕ್ಕಿ ಮಾತ್ರವಲ್ಲದೆ ಬೇಳೆ ಕಾಳುಗಳ ದರವೂ ಏರಿಕೆಯಾಗುತ್ತಿದೆ. ತೊಗರಿಬೇಳೆ ಕೆಜಿಗೆ 125ರಿಂದ 128 ರೂಪಾಯಿವರೆಗೆ ಏರಿಕೆಯಾಗಿದೆ. ಇತರ ಬೇಳೆ ಕಾಳುಗಳ ದರವೂ ಕ್ರಮೇಣ ಹೆಚ್ಚುತ್ತಿದ್ದು, ಅಡುಗೆ ಮನೆಯ ಖರ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೋಟೆಲ್, ಟೀ ಅಂಗಡಿ ಹಾಗೂ ಸಣ್ಣ ವ್ಯಾಪಾರಿಗಳ ಮೇಲೂ ಇದರ ಪರಿಣಾಮ ಬೀರಿದೆ.

Exit mobile version