ಚಿಕ್ಕಬಳ್ಳಾಪುರದಲ್ಲಿ ಪವನ್ ‘ಪವರ್’ ಪ್ರದರ್ಶನ: ಸರ್ ಎಂ. ವಿಶ್ವೇಶ್ವರಯ್ಯರನ್ನು ಹಾಡಿ ಹೊಗಳಿದ ಆಂಧ್ರ ಡಿಸಿಎಂ

Untitled design 2025 10 06t135014.186

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ನಡೆದ ಒಂದು ವಿಶೇಷ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಅವರು ಕನ್ನಡದಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿನ್ನಸಂದ್ರ ಬಳಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷದಷ್ಟು ಜನರಿದ್ದರು. ಪವನ್ ಕಲ್ಯಾಣ್ ಅವರು ವೇದಿಕೆಯ ಮೇಲೆ ಏರಿದಾಗ ‘ಜೈ ಪವನ್ ಕಲ್ಯಾಣ್’ ಘೋಷಣೆ ಕೂಗಿದರು.

ಪವನ್ ಕಲ್ಯಾಣ್‌ರ ಆಗಮನಕ್ಕೆ ಸಾವಿರಾರು ಅಭಿಮಾನಿಗಳು ಸೇರಿದ್ದು, ಕಾರ್ಯಕ್ರಮದ ವೇದಿಕೆಯು ಜನಸಾಗರದಂತೆ ಕಂಡುಬಂತು. ಈ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಹಾಜರಾಗಿದ್ದರು ಎಂದು ಅಂದಾಜಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪವನ್ ಕಲ್ಯಾಣ್ ವೇದಿಕೆಯ ಮೇಲೇರಿದ ಕೂಡಲೇ ಅಭಿಮಾನಿಗಳು ‘ಓಜಿ, ಓಜಿ’ ಎಂದು ಘೋಷಣೆ ಕೂಗಿದರು. ಪವನ್ ಕಲ್ಯಾಣ್ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸಿದ್ದು, ಸಭಿಕರ ಹೃದಯ ಗೆದ್ದರು. “ಚಿಂತಾಮಣಿಯ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕನ್ನಡ ಸಂಸ್ಕೃತಿಗೆ, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ತಮ್ಮ ರಚನೆಗಳಿಂದ ಪ್ರಖ್ಯಾತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರಿಗೂ ನಮನಗಳು” ಎಂದು ಹೇಳುತ್ತಾ ಕರುನಾಡ ಮಹನೀಯರನ್ನು ನೆನೆದರು.

ಗೋಪಾಲಗೌಡರ ಹುಟ್ಟುಹಬ್ಬದಲ್ಲಿ ಭಾಗಿಯಾಗಿರುವುದು ತಮಗೆ ಸಂತೋಷ ತಂದಿದೆ ಎಂದು ಪವನ್ ಹೇಳಿದರು. ಅನಾರೋಗ್ಯದ ನಡುವೆಯೂ ಕಾರ್ಯಕ್ರಮಕ್ಕೆ ಹಾಜರಾದ ಅವರು, ಭಾಷಣ ಮುಂದುವರೆಸಿದರು. ಜನಸೇನಾ ಪಕ್ಷಕ್ಕೆ ಬಲ ನೀಡಿದವರಲ್ಲಿ ಗೋಪಾಲಗೌಡ ಕೂಡ ಒಬ್ಬರು ಎಂದು ಕೊಂಡಾಡಿದರು. “ಅವರು ಹೋರಾಟಗಾರರು, ಜನಸೇನಾ ಪಕ್ಷದ ಸಿದ್ಧಾಂತಗಳನ್ನು ಗೌರವಿಸುತ್ತಾರೆ. ನಮ್ಮ ಹೋರಾಟಕ್ಕೆ ಅವರು ಬಲ ಇದ್ದಂತೆ. ನಮ್ಮಿಬ್ಬರಿಗೂ ಯುವಜನತೆ, ರೈತರು, ಪರಿಸರದ ಬಗ್ಗೆ ಕಾಳಜಿ ಇದೆ. ಆದರಿಂದಲೇ ನಾನು ರಾಜಕೀಯಕ್ಕೆ ಬಂದೆ. ನಾನು ಸೋಲುವ ಸಮಯದಲ್ಲಿ ಗೋಪಾಲಗೌಡ ಅವರು ನನಗೆ ಶಕ್ತಿ ತುಂಬಿದರು” ಎಂದು ನಿವೃತ್ತ ನ್ಯಾಯಮೂರ್ತಿಯನ್ನು ಪ್ರಶಂಸಿಸಿದರು.

ಪವನ್ ಕಲ್ಯಾಣ್ ಆಂಧ್ರ ಮತ್ತು ಕರ್ನಾಟಕದ ನಡುವಿನ ಬಾಂಧವ್ಯದ ಬಗ್ಗೆ ಮಾತಾಡುತ್ತಾ, “ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರುಗೆ ಆಹಾರ ಕೊಡುವ ಅಕ್ಷಯ ಪಾತ್ರೆಯಂತೆ ಇದೆ. ನಿಮ್ಮ ಅಭಿಮಾನ ಮತ್ತು ಪ್ರೀತಿ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಆಂಧ್ರ ಮತ್ತು ಕರ್ನಾಟಕದ ನಡುವೆ ದಶಕಗಳಿಂದ ಗೌರವ ಇದೆ. ಆಂಧ್ರಪ್ರದೇಶದಲ್ಲಿ ಕನ್ನಡ ಶಾಲೆಗಳಿವೆ, ಜನರು ಕನ್ನಡ ಕಲಿಯುತ್ತಿದ್ದಾರೆ” ಎಂದರು. ಮತ್ತಷ್ಟು ಉದಾಹರಣೆ ನೀಡುತ್ತಾ, “ಕಾಡು ಆಮೆಗಳನ್ನು ನಿಯಂತ್ರಿಸಲು ಕುಲ್ಕಿ ಆನೆಗಳನ್ನು ಕರ್ನಾಟಕ ನಮ್ಮ ರಾಜ್ಯಕ್ಕೆ ಕಳುಹಿಸಿದೆ. ಇದು ಆಂಧ್ರ ಹಾಗೂ ಕರ್ನಾಟಕದ ಬಾಂಧವ್ಯವನ್ನು ಪ್ರತಿನಿಧಿಸುತ್ತದೆ. ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಹಾಯದೊಂದಿಗೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ” ಎಂದು ಹೇಳಿದರು.

ಕಲೆ ಮತ್ತು ಸಂಸ್ಕೃತಿಯನ್ನು ಒಂದುಗೂಡಿಸಬೇಕು, ಬೇರೆ ಮಾಡಬಾರದು ಎಂದು ಪವನ್ ಒತ್ತಿ ಹೇಳಿದರು. “ನಾವೆಲ್ಲಾ ಭಾರತ ಮಾತೆಯ ಮಕ್ಕಳು. ಆಂಧ್ರಪ್ರದೇಶಕ್ಕೆ ಕರ್ನಾಟಕದ ಮೇಲೆ ತುಂಬಾ ಪ್ರೀತಿ ಇದೆ. ಕರ್ನಾಟಕದ ಸಂಸ್ಕೃತಿಯನ್ನು ಯಾವಾಗಲೂ ಪ್ರೀತಿಸುತ್ತದೆ. ಚಲನಚಿತ್ರಗಳು ಸೇರಿದಂತೆ ಹಲವು ಆಯಾಮಗಳಲ್ಲಿ ಗೌರವಿಸುತ್ತದೆ” ಎಂದು ಮಾತು ಮುಗಿಸುತ್ತಾ ‘ಜೈ ಹಿಂದ್, ಜೈ ಕರ್ನಾಟಕ ಮಾತೆ’ ಎಂದು ಘೋಷಣೆ ಕೂಗಿದರು.

Exit mobile version