ಬೆಂಗಳೂರು, ನವೆಂಬರ್ 23: ರಾಜ್ಯದಲ್ಲಿ ಪೊಲೀಸ್ ಇಲಾಖೆಯೊಳಗೆ ಯಾವುದೇ ಅಪರಾಧ ಚಟುವಟಿಕೆಗೆ ತೊಡಗಿರುವವರಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುಡುಗಿದ್ದಾರೆ. ಅಪರಾಧದಲ್ಲಿ ಪೊಲೀಸರೇ ಭಾಗಿಯಾದರೆ ಸೇವೆಯಿಂದ ವಜಾಗೊಳಿಸುವುದು ಜೊತೆಗೆ ಕಾನೂನು ಕ್ರಮ ಜೈಲು ಶಿಕ್ಷೆ ನೀಡಲಾಗುವುದು ಈ ತಪ್ಪು ಇದು ಖಚಿತ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಈ ಹೇಳಿಕೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ₹7.11 ಕೋಟಿ ನಗದು ದರೋಡೆ ಪ್ರಕರಣ ಭೇದಿಸಿದ ಬೆಂಗಳೂರು ನಗರ ಪೊಲೀಸರನ್ನು ಗೃಹ ಸಚಿವರು ಶ್ಲಾಘಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ.
ಈ ದರೋಡೆ ಪ್ರಕರಣ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಆದರೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ 200ಕ್ಕೂ ಹೆಚ್ಚು ಸಿಬ್ಬಂದಿ ತಾಂತ್ರಿಕ ಗುಪ್ತಚರ ಮಾಹಿತಿ, ಸಿಸಿಟಿವಿ ಫೂಟೇಜ್, ಮೊಬೈಲ್ ಟ್ರ್ಯಾಕಿಂಗ್ ಬಳಸಿ ಕೇವಲ ಕೆಲವೇ ದಿನಗಳಲ್ಲಿ ಪ್ರಕರಣ ಭೇದಿಸಿದ್ದಾರೆ. ಇವರೆಲ್ಲರಿಗೂ ನನ್ನ ಅಭಿನಂದನೆಗಳು ಎಂದು ಡಾ. ಪರಮೇಶ್ವರ್ ಹೇಳಿದರು.
ಅಲ್ಲದೆ, ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಪಾರದರ್ಶಕತೆ, ಜನಪರ ಕಾರ್ಯವೈಖರಿ ಇರಬೇಕು. ಯಾರೇ ಆಗಲಿ, ಗ್ಯಾಂಗ್‌ಸ್ಟರ್‌ಗಳೊಂದಿಗೆ ಒಡನಾಟ, ದರೋಡೆಕೋರರಿಗೆ ಸಹಾಯ ಮಾಡುವುದು, ಮಾದಕ ದ್ರವ್ಯ ದಂಧೆಯಲ್ಲಿ ಭಾಗಿಯಾಗುವುದು ಇಂತಹ ಯಾವುದೇ ಚಟುವಟಿಕೆ ಕಂಡುಬಂದರೆ ತಕ್ಷಣ ಕಠಿಣ ಕ್ರಮ ಕೈಗೊಂಡು, ಇಲಾಖೆಯಿಂದ ವಜಾ ಮಾಡುವುದು ಮಾತ್ರವಲ್ಲ, ಕಾನೂನು ಪ್ರಕಾರ ಜೈಲು ಶಿಕ್ಷೆಯೂ ಖಚಿತ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ರಾಜ್ಯದ ಹಲವೆಡೆ ಪೊಲೀಸರ ವಿರುದ್ಧ ಗ್ಯಾಂಗ್‌ಸ್ಟರ್‌ಗಳೊಂದಿಗೆ ಸಂಪರ್ಕ, ಲಂಚ ಪಡೆಯುವುದು, ದರೋಡೆಕೋರರಿಗೆ ಮಾಹಿತಿ ಸೋರಿಕೆ ಮಾಡುವ ಆರೋಪಗಳು ಕೇಳಿಬಂದಿದ್ದವು. ಇದರ ಹಿನ್ನೆಲೆಯಲ್ಲಿ ಗೃಹ ಸಚಿವರು ರಾಜ್ಯ ಪೊಲೀಸ್ ಡಿಜಿಪಿ, ಎಲ್ಲ ರೇಂಜ್ ಐಜಿಪಿಗಳು, ಎಸ್ಪಿಗಳಿಗೆ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ. ಇಲಾಖೆಯೊಳಗೆ ಶಿಸ್ತು ಕಾಪಾಡಲು ಆಂತರಿಕ ತನಿಖಾ ತಂಡಗಳನ್ನು ರಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
₹7.11 ಕೋಟಿ ದರೋಡೆ ಪ್ರಕರಣದಲ್ಲಿ ಬಂಧಿತ ಏಳು ಮಂದಿಯಿಂದ ₹4.8 ಕೋಟಿ ನಗದು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ₹2.3 ಕೋಟಿ ಮೊತ್ತವನ್ನು ವಸೂಲು ಮಾಡಲು ವಿಶೇಷ ತಂಡ ರಚಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ತಿಳಿಸಿದ್ದಾರೆ.ಪೊಲೀಸ್ ಇಲಾಖೆಯ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಯಾವುದೇ ರಾಜಿ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
