ಆನ್‌ಲೈನ್ ಔಷಧಿ ಮಾರಾಟಕ್ಕೆ ಬ್ರೇಕ್? ರಾಜ್ಯಾದ್ಯಂತ ಮೆಡಿಕಲ್ ಶಾಪ್ ಬಂದ್‌ಗೆ ಕರೆ!

Untitled design 2026 05 16T174553.589

ಬೆಂಗಳೂರು: ಡೆಲಿವರಿ ಆ್ಯಪ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಔಷಧಿಗಳ ಮಾರಾಟ ಹೆಚ್ಚುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಮೆಡಿಕಲ್ ಶಾಪ್‌ಗಳ ಮಾಲೀಕರು ಬೃಹತ್ ಬಂದ್‌ಗೆ ಕರೆ ನೀಡಿದ್ದಾರೆ. ಮೇ 20ರಂದು ಕರ್ನಾಟಕದಾದ್ಯಂತ ಸುಮಾರು 26 ಸಾವಿರಕ್ಕೂ ಹೆಚ್ಚು ಫಾರ್ಮಸಿಗಳು ಸಂಪೂರ್ಣವಾಗಿ ಮುಚ್ಚಲಿದ್ದು, ಬೆಂಗಳೂರಿನಲ್ಲೇ ಸುಮಾರು 6,500ಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಿವೆ.

ಆನ್‌ಲೈನ್ ಔಷಧಿ ಮಾರಾಟದಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಮೆಡಿಕಲ್ ಶಾಪ್‌ಗಳಿಗೆ ಭಾರೀ ಆರ್ಥಿಕ ಹೊಡೆತ ಬೀಳುತ್ತಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಮಯದಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದ್ದ ಹಿನ್ನೆಲೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಆನ್‌ಲೈನ್ ಔಷಧಿ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೆ ಕೋವಿಡ್ ಪರಿಸ್ಥಿತಿ ಬಳಿಕ ಈ ವ್ಯವಸ್ಥೆ ಮುಂದುವರಿದಿದ್ದು, ಈಗ ದೊಡ್ಡ ಆ್ಯಪ್ ಕಂಪನಿಗಳು ಭಾರಿ ರಿಯಾಯಿತಿ, ಕ್ಯಾಶ್‌ಬ್ಯಾಕ್ ಹಾಗೂ 10 ನಿಮಿಷ ಡೆಲಿವರಿ ಸೇವೆಗಳ ಮೂಲಕ ಸ್ಥಳೀಯ ಫಾರ್ಮಸಿಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ ಎನ್ನಲಾಗಿದೆ.

ಕರ್ನಾಟಕ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ಜೀವನ್ ಕುಶಾಲಪ್ಪ ಮಾತನಾಡಿ, “ಆನ್‌ಲೈನ್ ಕಂಪನಿಗಳ ಅನಿಯಂತ್ರಿತ ವ್ಯವಹಾರದಿಂದ ಸ್ಥಳೀಯ ಮೆಡಿಕಲ್ ಶಾಪ್‌ಗಳು ಸಂಕಷ್ಟದಲ್ಲಿದೆ. ಆದ್ದರಿಂದ ಮೇ 20ರಂದು ರಾಜ್ಯಾದ್ಯಂತ ಬಂದ್ ನಡೆಸಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದ್ದಾರೆ.

ಅವರು ಮುಂದುವರಿದು, “ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಆಸ್ಪತ್ರೆಗಳ ಬಳಿಯ ಕೆಲವು ಮೆಡಿಕಲ್ ಶಾಪ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ. ಉಳಿದ ಅಂಗಡಿಗಳು ದಿನಪೂರ್ತಿ ಬಂದ್ ಆಗಲಿವೆ” ಎಂದು ಸ್ಪಷ್ಟಪಡಿಸಿದರು.

ಫಾರ್ಮಸಿ ಮಾಲೀಕರ ಪ್ರಕಾರ, ಭಾರತದಲ್ಲಿ ಇರುವ ಇ-ಫಾರ್ಮಸಿ ನಿಯಮಾವಳಿಗಳ ಪ್ರಕಾರ ಲೈಸೆನ್ಸ್ ಹೊಂದಿದ ಭೌತಿಕ ಅಂಗಡಿಗಳ ಮೂಲಕವೇ ಔಷಧಿ ಮಾರಾಟ ನಡೆಯಬೇಕು. ಆದರೆ ಅನೇಕ ಆನ್‌ಲೈನ್ ಆ್ಯಪ್‌ಗಳು ನಿಯಮಗಳನ್ನು ಉಲ್ಲಂಘಿಸಿ ಔಷಧಿಗಳನ್ನು ಮನೆಬಾಗಿಲಿಗೆ ತಲುಪಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು ನಗರದ ಜಯನಗರ, ಕತ್ರಿಗುಪ್ಪೆ ಸೇರಿದಂತೆ ಹಲವೆಡೆ ಫಾರ್ಮಸಿ ನಡೆಸುತ್ತಿರುವ ಮಾಲೀಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. “ಮೊದಲು ಆನ್‌ಲೈನ್ ಆ್ಯಪ್‌ಗಳು ಸಣ್ಣ ದಿನಸಿ ಅಂಗಡಿಗಳ ವ್ಯಾಪಾರಕ್ಕೆ ಹೊಡೆತ ನೀಡಿದವು. ಈಗ ಮೆಡಿಕಲ್ ಶಾಪ್‌ಗಳತ್ತ ಮುಖ ಮಾಡಿವೆ. ಯುವಕರು ನೇರವಾಗಿ ಅಂಗಡಿಗಳಿಗೆ ಬರುವುದೇ ಕಡಿಮೆಯಾಗಿದೆ. ಹಿರಿಯ ನಾಗರಿಕರು ಮಾತ್ರ ತಮ್ಮ ನಿಯಮಿತ ಔಷಧಿಗಳಿಗಾಗಿ ನಮ್ಮನ್ನು ಅವಲಂಬಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

Exit mobile version