ದಿಢೀರ್‌‌ ಈರುಳ್ಳಿ ದರ ಏರಿಕೆ: ಕೆ.ಜಿ.ಗೆ 50 ರೂಪಾಯಿ ದಾಟಿದ ಬೆಲೆ

Untitled design 2026 08 25T085637.761

ಬೆಂಗಳೂರು/ನವದೆಹಲಿ: ಈಗಾಗಲೇ ಸಕ್ಕರೆ, ಬೆಲ್ಲ, ಅಕ್ಕಿ ಸೇರಿದಂತೆ ಹಲವು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿ ಗ್ರಾಹಕರು ಈಗಾಗಲೇ ಸಂಕಷ್ಟದಲ್ಲಿರುವ ನಡುವೆ, ಈರುಳ್ಳಿ ದರವೂ ಹೆಚ್ಚಳವಾಗಿ ಇನ್ನಷ್ಟು ಹೊರೆ ಉಂಟುಮಾಡಿದೆ. ಬೆಂಗಳೂರಿನ ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರವು ಕೇವಲ ಒಂದು ವಾರದಲ್ಲಿ ಕ್ವಿಂಟಲ್‌ಗೆ ₹1,600 ರಷ್ಟು ಏರಿಕೆಯಾಗಿದ್ದು, ರಿಟೇಲ್ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ ₹50-55 ಮಟ್ಟದಲ್ಲಿ ಮಾರಾಟವಾಗುತ್ತಿದೆ.

ಯಶವಂತಪುರ ಮಾರುಕಟ್ಟೆಯಲ್ಲಿ ಏನಿದೆ ಅಂಕಿಅಂಶ?

ಆಗಸ್ಟ್ 15ರಂದು ‘ಎ’ ದರ್ಜೆಯ ಕ್ವಿಂಟಲ್ ಈರುಳ್ಳಿ ದರ ₹3,000 ವರೆಗಿತ್ತು. ಆದರೆ, ಆಗಸ್ಟ್ 24ರಂದು ಇದೇ ಗುಣಮಟ್ಟದ ಈರುಳ್ಳಿ ಬೆಲೆ ₹4,500-₹4,600ಕ್ಕೆ ಏರಿಕೆಯಾಗಿದೆ. ಗುರುವಾರ ಮತ್ತು ಶುಕ್ರವಾರ ನಡೆದ ವಹಿವಾಟಿನಲ್ಲಿ ಈರುಳ್ಳಿ ಕ್ವಿಂಟಲ್‌ಗೆ ₹5,200ಕ್ಕೆ ತಲುಪಿತ್ತು. ಶನಿವಾರ ಮಾರುಕಟ್ಟೆಗೆ 65 ಸಾವಿರ ಚೀಲಗಳು (ಒಂದು ಚೀಲದಲ್ಲಿ 50-55 ಕೆ.ಜಿ) ಆವಕವಾಗಿ ದರ ಸ್ವಲ್ಪ ಇಳಿದಿತ್ತು. ಆದರೆ, ಸೋಮವಾರ ಕೇವಲ 43,500 ಚೀಲಗಳು ಮಾತ್ರ ಆವಕವಾಗಿದ್ದು, ದರ ಮತ್ತೆ ಏರಿಕೆಯಾಗಿದೆ.

ಮಳೆ ಕೊರತೆಯೇ ಕಾರಣ?

ರಾಜ್ಯದ ಈರುಳ್ಳಿ ಬೆಳೆಯಲ್ಲಿ ಶೇಕಡಾ 70 ರಷ್ಟು ಮಳೆಯಾಶ್ರಿತವಾಗಿದೆ. ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದು ಗ್ರಾಹಕರಿಗೆ ಮತ್ತಷ್ಟು ಆತಂಕ ಮೂಡಿಸಿದೆ.

ಅಖಿಲ ಭಾರತ ಬೆಲೆ ವಿವರ

ಅಖಿಲ ಭಾರತ ಮಟ್ಟದಲ್ಲಿ ಸೋಮವಾರ ಈರುಳ್ಳಿಯ ಸರಾಸರಿ ರಿಟೇಲ್ ದರ ₹43.53/ಕೆಜಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹27.37/ಕೆಜಿ ಇತ್ತು. ಅಂದರೆ ಶೇ.59 ರಷ್ಟು ಏರಿಕೆ. ಸಗಟು ಮಾರುಕಟ್ಟೆಯಲ್ಲಿ ದರವು ₹21.23 ಇದ್ದದ್ದು, ಈಗ ₹35.58ಕ್ಕೆ ತಲುಪಿದೆ – ಶೇ.68 ರಷ್ಟು ಏರಿಕೆ.

ಪ್ರಮುಖ ನಗರಗಳ ರಿಟೇಲ್ ಬೆಲೆಗಳು

ಕೇಂದ್ರದ ಪರಿಹಾರ ಕ್ರಮಗಳು

ಬೆಲೆ ನಿಯಂತ್ರಣದ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ನಿಧಿ ಖಾರೆ ಅವರು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು NAFED ಮೂಲಕ ಕೆ.ಜಿ ಈರುಳ್ಳಿಯನ್ನು ₹35ರಂತೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

‘ಕಂದಾ ಎಕ್ಸ್ಪ್ರೆಸ್’ ರೈಲು ಸೇವೆ

ಮಹಾರಾಷ್ಟ್ರದ ನಾಸಿಕ್ನಿಂದ ಅತಿ ಹೆಚ್ಚು ಈರುಳ್ಳಿ ಬಳಸುವ ಚೆನ್ನೈ, ಮದುರೆ, ದೆಹಲಿ, ಎರ್ನಾಕುಲಂ ಮತ್ತು ಗುವಾಹಟಿಗೆ ‘ಕಂದಾ ಎಕ್ಸ್ಪ್ರೆಸ್’ ಮೂಲಕ ಈರುಳ್ಳಿ ಸಾಗಣೆ ಆರಂಭಿಸಲಾಗಿದೆ. ಈ ರೇಕ್ಗಳು ಬುಧವಾರದ ವೇಳೆಗೆ ಮಾರುಕಟ್ಟೆಗಳನ್ನು ತಲುಪುವ ನಿರೀಕ್ಷೆಯಿದ್ದು, ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ನಂತರ ಇತರ ಪ್ರದೇಶಗಳಿಗೆ ಅಗತ್ಯಕ್ಕೆ ತಕ್ಕಂತೆ ರವಾನಿಸಲಾಗುವುದು.

Exit mobile version