ಪಾದಯಾತ್ರೆಗೆ ಮುನ್ನ ದೇವೇಗೌಡರ ಆಶೀರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ

ಭಾವುಕರಾದ (20)

ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ವತಿಯಿಂದ ಇಂದಿನಿಂದ ಬೃಹತ್ ಪಾದಯಾತ್ರೆ ಆರಂಭವಾಗಿದೆ. ರೈತರ ಭೂಮಿಯನ್ನು ಉಳಿಸುವುದು ಹಾಗೂ ಯೋಜನೆಯಿಂದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬ ಒತ್ತಾಯದೊಂದಿಗೆ ಜೆಡಿಎಸ್ ಹೋರಾಟಕ್ಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ದೇವೇಗೌಡರ ನಿವಾಸಕ್ಕೆ ತೆರಳಿದ ನಿಖಿಲ್ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ನಡೆಯಲಿರುವ ಪಾದಯಾತ್ರೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಪಾದಯಾತ್ರೆಯ ಉದ್ದೇಶ, ಹೋರಾಟದ ರೂಪುರೇಷೆ ಹಾಗೂ ರೈತರ ಪರವಾಗಿ ಜೆಡಿಎಸ್ ಕೈಗೊಂಡಿರುವ ಕ್ರಮಗಳ ಬಗ್ಗೆ ದೇವೇಗೌಡರೊಂದಿಗೆ ಚರ್ಚಿಸಿದರು.

ಈ ವೇಳೆ ದೇವೇಗೌಡರು ನಿಖಿಲ್ ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ, ಹೋರಾಟಕ್ಕೆ ಶುಭ ಹಾರೈಸಿದರು. ರೈತರ ಹಿತಕ್ಕಾಗಿ ಮತ್ತು ರೈತರ ಭೂಮಿಯನ್ನು ಉಳಿಸುವ ಉದ್ದೇಶದಿಂದ ಹೋರಾಟ ನಡೆಸುತ್ತಿರುವುದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ದೃಢವಾಗಿ ನಿಲ್ಲುವಂತೆ ನಿಖಿಲ್‌ಗೆ ಕಿವಿಮಾತು ಹೇಳಿದರು.

‘ರೈತರ ಹಿತಕ್ಕಾಗಿ, ರೈತರ ಭೂಮಿಯನ್ನು ಉಳಿಸಲು ಈ ಹೋರಾಟ ಮಾಡುತ್ತಿದ್ದೀರಿ. ದೃಢವಾಗಿ ನಿಂತು ಹೋರಾಡಿ. ಜನರ ಬೆಂಬಲ ನಿಮ್ಮೊಂದಿಗಿದೆ’ ಎಂದು ದೇವೇಗೌಡರು ನಿಖಿಲ್‌ಗೆ ಧೈರ್ಯ ತುಂಬಿದರು. ದೇವೇಗೌಡರ ಆಶೀರ್ವಾದ ಪಡೆದ ಬಳಿಕ ನಿಖಿಲ್ ಕೂಡ ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ಸಂಕಲ್ಪದೊಂದಿಗೆ ಕಾರ್ಯಕರ್ತರೊಂದಿಗೆ ಮುಂದುವರಿಯಲಿದ್ದಾರೆ.

ಇನ್ನೊಂದೆಡೆ, ಬಿಡದಿ ಟೌನ್‌ಶಿಪ್ ವಿರುದ್ಧದ ಜೆಡಿಎಸ್ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದ ಅವರು, ಪಾದಯಾತ್ರೆ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆಯಬೇಕು ಮತ್ತು ರೈತರ ಹೋರಾಟಕ್ಕೆ ನ್ಯಾಯ ಸಿಗಬೇಕು ಎಂದು ಪ್ರಾರ್ಥಿಸಿದರು.

ಕುಮಾರಸ್ವಾಮಿ ಅವರೊಂದಿಗೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಇದ್ದರು. ಇದೇ ವೇಳೆ ಶಾಸಕ ಹೆಚ್.ಡಿ. ರೇವಣ್ಣ ಕೂಡ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿ ಬಿಡದಿ ಟೌನ್‌ಶಿಪ್ ವಿರುದ್ಧದ ಹೋರಾಟ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ಇದೀಗ ರಾಜ್ಯ ರಾಜಕೀಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದ್ದು, ಜೆಡಿಎಸ್ ಸರ್ಕಾರದ ವಿರುದ್ಧ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ. ರೈತರ ಭೂಮಿ ರಕ್ಷಣೆ ಮತ್ತು ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಈ ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

Exit mobile version