ಲಕ್ಷ್ಮೀ ಪೂಜೆ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: 11 ಮಂದಿ ಬಂಧನ

Untitled Design 2026 11 12T175602.430

ಬಳ್ಳಾರಿ: ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆ ಸುರಿಯುತ್ತದೆ ಎಂಬ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡು, ಮುಗ್ಧ ಯುವತಿಯರನ್ನು ವಂಚಿಸಿ ಲೈಂಗಿಕ ಶೋಷಣೆ ಹಾಗೂ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಅಂತರರಾಜ್ಯ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ. ‘ಅಕ್ಕ ಪಡೆ’ಯ ಮಹಿಳಾ ಪೊಲೀಸ್ ಸಿಬ್ಬಂದಿ ಸುಮಾರು ಎರಡು ತಿಂಗಳ ಕಾಲ ನಡೆಸಿದ ರಹಸ್ಯ ಕಾರ್ಯಾಚರಣೆಯ ಬಳಿಕ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಹಾಗೂ ಮೂಢನಂಬಿಕೆಗಳನ್ನು ನಂಬುವ ಅವಿವಾಹಿತ ಯುವತಿಯರನ್ನೇ ಈ ಜಾಲ ಗುರಿಯಾಗಿಸಿಕೊಂಡಿತ್ತು ಎನ್ನಲಾಗಿದೆ. ಸುಂದರವಾಗಿರುವ, ಕನಿಷ್ಠ 5 ಅಡಿ 6 ಇಂಚು ಎತ್ತರವಿರುವ ಅವಿವಾಹಿತ ಯುವತಿಯರು ವಿಶೇಷ ಲಕ್ಷ್ಮೀ ಪೂಜೆ ನಡೆಸಿದರೆ ಅಪಾರ ಪ್ರಮಾಣದ ಹಣ ಸಿಗುತ್ತದೆ ಎಂದು ಆರೋಪಿಗಳು ನಂಬಿಸುತ್ತಿದ್ದರು. ಈ ಮೂಲಕ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಪೂಜೆ ಹೆಸರಿನಲ್ಲಿ ಯುವತಿಯರಿಗೆ ಆಮಿಷ

ಆರಂಭದಲ್ಲಿ ಯುವತಿಯರ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಆರೋಪಿಗಳು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಬಳಿಕ ವಿಶೇಷ ಪೂಜೆಯಿಂದ ಹಣದ ಮಳೆ ಸುರಿಯಲಿದ್ದು, ಅದರಲ್ಲಿ ಯುವತಿಗೆ ಒಂದು ಪಾಲು, ಪೂಜೆ ನಡೆಸುವ ಸ್ವಾಮೀಜಿಗೆ ಮತ್ತೊಂದು ಪಾಲು ಹಾಗೂ ಮಧ್ಯವರ್ತಿ ಏಜೆಂಟ್‌ಗೆ ಇನ್ನೊಂದು ಪಾಲು ಸಿಗುತ್ತದೆ ಎಂದು ಆಮಿಷವೊಡ್ಡುತ್ತಿದ್ದರು.

ಆದರೆ, ಇದು ಕೇವಲ ಪೂಜೆಯ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆಯಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಯುವತಿಯರನ್ನು ನಿರ್ದಿಷ್ಟ ಸ್ಥಳಗಳಿಗೆ ಕರೆಸಿಕೊಂಡು, ಅವರ ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ವಿಡಿಯೋಗಳನ್ನು ಬಳಸಿಕೊಂಡು ಯುವತಿಯರ ಮೇಲೆ ಒತ್ತಡ ಹೇರುತ್ತಿದ್ದ ಆರೋಪಿಗಳು, ಅವರನ್ನು ವೇಶ್ಯಾವಾಟಿಕೆ ಹಾಗೂ ಮಹಿಳೆಯರ ಸಾಗಣೆ ದಂಧೆಗೆ ಬಳಸಿಕೊಳ್ಳುತ್ತಿದ್ದರು ಎಂಬ ಗಂಭೀರ ಆರೋಪಗಳಿವೆ.

ಎರಡು ತಿಂಗಳ ರಹಸ್ಯ ಕಾರ್ಯಾಚರಣೆ

ಈ ಜಾಲದ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣದ ಗಂಭೀರತೆಯನ್ನು ಅರಿತ ಬಳ್ಳಾರಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ‘ಅಕ್ಕ ಪಡೆ’ಯ ಮಹಿಳಾ ಪೊಲೀಸ್ ಸಿಬ್ಬಂದಿಯೇ ಬಡ ಮಹಿಳೆಯರ ಸೋಗಿನಲ್ಲಿ ಆರೋಪಿಗಳ ಸಂಪರ್ಕ ಬೆಳೆಸಿದ್ದರು. ಬಳಿಕ ನಿರಂತರವಾಗಿ ಎರಡು ತಿಂಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿ, ಆರೋಪಿಗಳ ಚಲನವಲನ, ಸಂಪರ್ಕ ಜಾಲ ಹಾಗೂ ದಂಧೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

ಸಾಕಷ್ಟು ಮಾಹಿತಿ ಕಲೆಹಾಕಿದ ನಂತರ ಪೊಲೀಸರು ದಾಳಿ ನಡೆಸಿ 11 ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.

ಹಲವು ಜಿಲ್ಲೆಗಳಿಗೆ ಹರಡಿದ್ದ ಜಾಲ

ಈ ಜಾಲವು ಕರ್ನಾಟಕದ ಬಳ್ಳಾರಿ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಜೊತೆಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿಯೂ ಸಕ್ರಿಯವಾಗಿತ್ತು ಎನ್ನಲಾಗಿದೆ. ಪೊಲೀಸರ ಕಣ್ಣುತಪ್ಪಿಸಲು ಆರೋಪಿಗಳು ‘ಮೀಡಿಯಾ’, ‘ಪೇಪರ್’ ಸೇರಿದಂತೆ ಹಲವು ಕೋಡ್‌ವರ್ಡ್‌ಗಳನ್ನು ಬಳಸಿಕೊಂಡು ಪರಸ್ಪರ ಸಂವಹನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ದಂಧೆಯ ಪ್ರಮುಖ ಸೂತ್ರಧಾರ ಎನ್ನಲಾದ ಸ್ವಾಮೀಜಿಯೊಬ್ಬರು ‘ಡಿಆರ್‌ಎ’ (DRA) ಎಂಬ ಕೋಡ್‌ವರ್ಡ್ ಮೂಲಕ ವ್ಯವಹಾರ ನಡೆಸುತ್ತಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಾಮೀಜಿ ಸದ್ಯ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Exit mobile version