ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ನೇಣಿಗೆ ಶರಣು

Untitled design 2025 12 13T181457.365

ಬೆಂಗಳೂರು: ಪ್ರೀತಿಸಿ ಮದುವೆಯಾಗಿ ಕೇವಲ ಏಳು ತಿಂಗಳು ಕಳೆದಿದ್ದ ನವವಿವಾಹಿತೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಶಾಮಭಟ್ಟರಪಾಳ್ಯ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಐಶ್ವರ್ಯ ಎಂಬ ಯುವತಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾಳೆ..

ಐಶ್ವರ್ಯ ಕಳೆದ ಏಳು ತಿಂಗಳ ಹಿಂದೆ ಲಕ್ಷ್ಮೀನಾರಾಯಣ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆ ನಂತರ ದಂಪತಿಗಳು ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ, ತಂಗಿಯ ಹುಟ್ಟುಹಬ್ಬದ ಪಾರ್ಟಿಗೆ ಕರೆದೊಯ್ಯುವ ವಿಚಾರದಲ್ಲಿ ಸಣ್ಣ ಜಗಳ ನಡೆದಿದೆ.

ತಂಗಿಯ ಬರ್ತ್‌ಡೇ ಪಾರ್ಟಿಗೆ ತನ್ನನ್ನು ಕರೆದೊಯ್ಯುವಂತೆ ಐಶ್ವರ್ಯ ತನ್ನ ಪತಿ ಲಕ್ಷ್ಮೀನಾರಾಯಣನಲ್ಲಿ ಕೇಳಿಕೊಂಡಿದ್ದಳು. ಆದರೆ, ಪತಿ “ಈಗ ಹಣವಿಲ್ಲ, ಮುಂದಿನ ವರ್ಷ ಕರೆದೊಯ್ಯುತ್ತೇನೆ” ಎಂದು ಹೇಳಿದ್ದಾನಂತೆ. ಇದರಿಂದ ಮನನೊಂದ ಐಶ್ವರ್ಯ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಮುಂದಾಗಿದ್ದಾಳೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಐಶ್ವರ್ಯಳ ಕುಟುಂಬಸ್ಥರು ಪತಿ ಲಕ್ಷ್ಮೀನಾರಾಯಣ ಹಾಗೂ ಮಾವ ಹನುಮಂತರಾಜು ವಿರುದ್ಧ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಡೆತ್‌ನೋಟ್ ಬರೆದು ನವ ವಿವಾಹಿತೆ ಆತ್ಮಹತ್ಯೆ

ಗದಗ ಜಿಲ್ಲೆಯ ಬೆಟಗೇರಿಯ ಶರಣ ಬಸವೇಶ್ವರ ನಗರದಲ್ಲಿ ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಮಹಿಳೆ ಪೂಜಾ ಅಮರೇಶ ಅಯ್ಯನಗೌಡರ್ (27). ಪೂಜಾ ತಮ್ಮ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೂಜಾ ಅವರ ಕುಟುಂಬಸ್ಥರ ಆರೋಪದ ಪ್ರಕಾರ, ಆಕೆಯ ಅತ್ತೆ ಶಶಿಕಲಾ, ಬಾವ ವೀರನಗೌಡ ಮತ್ತು ಮಾವ ನಿತ್ಯ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಪೂಜಾ ಸ್ವಲ್ಪ ಕಪ್ಪು ಬಣ್ಣದವರಾಗಿದ್ದರಿಂದ ಅತ್ತೆ ಆಕೆಯನ್ನು ಅಪಹಾಸ್ಯ ಮಾಡುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.

ಪೂಜಾ ಕೇವಲ ನಾಲ್ಕು ತಿಂಗಳ ಹಿಂದೆ ಅಮರೇಶ ಎಂಬುವರನ್ನು ವಿವಾಹವಾಗಿದ್ದರು. ಆಕೆಯ ಪತಿ ಅಮರೇಶ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರವಷ್ಟೇ ಕೆಲಸದ ನಿಮಿತ್ತ ಚೆನ್ನೈಗೆ ತೆರಳಿದ್ದರು.

ಘಟನೆಯ ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version