ಪ್ರೀತಿಸಿ ಮದುವೆಯಾದರೂ ಪತ್ನಿಯನ್ನು ರಹಸ್ಯವಾಗಿಟ್ಟಿದ್ದ ಪತಿ: ಮನನೊಂದು ನವವಿವಾಹಿತೆ ಆತ್ಮಹ*ತ್ಯೆ

ಮುನ್ಸೂಚನೆ (6)

ನೆಲಮಂಗಲ, ಜುಲೈ 13: ಪ್ರೀತಿಸಿ ಮದುವೆಯಾಗಿ ಕೇವಲ ಕೆಲವೇ ದಿನಗಳಾಗಿದ್ದ ನವವಿವಾಹಿತೆಯೊಬ್ಬರು ಪತಿಯಿಂದ ಮನನೊಂದು ವಿಷ ಕುಡಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ನೆಲಮಂಗಲದ (Nelamangala) ಬಸವನಹಳ್ಳಿಯಲ್ಲಿ ನಡೆದಿದೆ.

ಪ್ರೀತಿಸಿ ಮದುವೆಯಾಗಿದ್ದರೂ, ಪತಿ ತನ್ನನ್ನು ರಹಸ್ಯವಾಗಿಟ್ಟಿದ್ದ ಮತ್ತು ತನಗೆ ಸರಿಯಾದ ಗೌರವ ನೀಡದ ಕಾರಣಕ್ಕೆ ಮನನೊಂದು ತನುಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೃತ ಯಾರು?

ಗೌರಿಬಿದನೂರಿನ ಬೀರಮ್ಮನಹಳ್ಳಿ ಮೂಲದ ತನುಜಾ (31) ಮೃತ ದುರ್ದೈವಿ. ಅವರು ಯಲಹಂಕದ ಮಾಯಸಂದ್ರ ನಿವಾಸಿಯಾದ ರವೀಂದ್ರ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ತನುಜಾ ಮತ್ತು ರವೀಂದ್ರ ಇಬ್ಬರೂ ಕೆಲಸಕ್ಕೆ ಹೋಗುವಾಗ ಪರಿಚಯವಾಗಿದ್ದರು. ದಿನಗಳೆದಂತೆ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಪರಸ್ಪರ ಇಷ್ಟಪಟ್ಟು ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು.

ಆತ್ಮಹತ್ಯೆಗೆ ಕಾರಣವೇನು?

ಮದುವೆಯಾದ ನಂತರ, ಸ್ವಲ್ಪ ಸಮಯ ಕಳೆಯಲಿ, ಆಮೇಲೆ ನಮ್ಮ ಮನೆಯಲ್ಲಿ ವಿಷಯ ತಿಳಿಸುತ್ತೇನೆ ಎಂದು ರವೀಂದ್ರ ಹೇಳಿದ್ದರು. ಆತ್ಮವಿಶ್ವಾಸದಿಂದ ಮದುವೆಯಾದ ತನುಜಾಳನ್ನು ಅವರು ಯಲಹಂಕದ ಸಿಂಗಾಪುರದ ಬಾಡಿಗೆ ಮನೆಯೊಂದರಲ್ಲಿ ಇರಿಸಿದ್ದರು. ಆದರೆ, ತಮ್ಮ ಸಂಬಂಧವನ್ನು ರಹಸ್ಯವಾಗಿಡಲಾಗಿದೆ ಮತ್ತು ಸಮಾಜದಲ್ಲಿ ತನಗೆ ಸರಿಯಾದ ಸ್ಥಾನ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಹೇಗೆ ಸಂಭವಿಸಿತು?

ಭಾನುವಾರ (ಜುಲೈ 13) ತನುಜಾ ತನ್ನ ಪತಿ ರವೀಂದ್ರನಿಗೆ ಫೋನ್ ಮಾಡಿ, ಮನೆಗೆ ಬರುವಂತೆ ಕರೆದಿದ್ದಳು. ಆದರೆ ರವೀಂದ್ರ, “ಈಗ ಬರಲು ಸಾಧ್ಯವಿಲ್ಲ, ನಾಳೆ ಬೆಳಗ್ಗೆ ಬರುತ್ತೇನೆ” ಎಂದು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಮತ್ತು ಮನನೊಂದ ತನುಜಾ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಳು.

ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ರವೀಂದ್ರನಿಗೆ, “ನಾನು ನೆಲಮಂಗಲದ ಬಸವನಹಳ್ಳಿಯಲ್ಲಿ ಕುಳಿತು ವಿಷ ಕುಡಿದಿದ್ದೇನೆ” ಎಂದು ಮೆಸೇಜ್ ಕಳುಹಿಸಿದ್ದಳು. ಈ ಮೆಸೇಜ್ ನೋಡಿ ಗಾಬರಿಗೊಂಡ ರವೀಂದ್ರ ತಕ್ಷಣವೇ ಬಸವನಹಳ್ಳಿಗೆ ಧಾವಿಸಿದ್ದರು. ಸ್ಥಳದಲ್ಲಿ ತನುಜಾ ಬಿದ್ದಿರುವುದನ್ನು ಕಂಡು, ತಕ್ಷಣವೇ ಆಕೆಯನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ತನುಜಾ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ತನುಜಾ-ರವೀಂದ್ರ ಪ್ರೇಮ ಕಥೆ

ತನುಜಾ ಮತ್ತು ರವೀಂದ್ರ ಇಬ್ಬರೂ ಬೆಂಗಳೂರಿನಲ್ಲಿ ಕೆಲಸಕ್ಕಾಗಿ ವಾಸವಾಗಿದ್ದರು. ಅಲ್ಲಿ ಇಬ್ಬರ ನಡುವೆ ಪರಿಚಯವಾಯಿತು. ಕ್ರಮೇಣ ಅದು ಪ್ರೀತಿಯಾಗಿ ತಿರುಗಿತ್ತು. ವಿವಿಧ ಸಮುದಾಯಗಳಿಗೆ ಸೇರಿದ ಇಬ್ಬರೂ ತಮ್ಮ ಪ್ರೀತಿಯನ್ನು ಕುಟುಂಬದವರಿಗೆ ತಿಳಿಸದೆ, ರಹಸ್ಯವಾಗಿಯೇ ವಿವಾಹವಾದರು. 

ಪೊಲೀಸರ ತನಿಖೆ

ಸದ್ಯ ಈ ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಪೊಲೀಸರು ರವೀಂದ್ರನನ್ನು ವಿಚಾರಣೆಗೆ ಒಳಪಡಿಸಿದ್ದು, ಘಟನೆಯ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.

Exit mobile version