ಮಂಡ್ಯ: ಆದಿಚುಂಚನಗಿರಿ ಮಠದಲ್ಲಿ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಶ್ರೀ ಗುರು ಭೈರವೈಕ್ಯ ಮಂದಿರ (ಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆ) ಉದ್ಘಾಟನೆಗೆ ಸಿದ್ಧವಾಗಿದೆ. ಚಾಲುಕ್ಯ, ಹೊಯ್ಸಳ, ಚೋಳ ಮತ್ತು ಗಂಗರ ಕಾಲದ ಶಿಲ್ಪಕಲೆಗಳ ಸಮ್ಮಿಶ್ರಣದೊಂದಿಗೆ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾದ ಈ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಾಳೆ ಬೆಳಗ್ಗೆ ಮಂಡ್ಯ ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ. ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ
- ಬೆಳಗ್ಗೆ 10.05ಕ್ಕೆ – HAL ವಿಮಾನ ನಿಲ್ದಾಣಕ್ಕೆ ಆಗಮನ.
- 10.10ಕ್ಕೆ – ಬೆಂಗಳೂರಿನಿಂದ ಹೊರಡುವುದು.
- ಬೆಳಗ್ಗೆ 10.50ಕ್ಕೆ – ಆದಿಚುಂಚನಗಿರಿ ತಪೋವನ ಹೆಲಿಪ್ಯಾಡ್‌ಗೆ ಆಗಮನ.
- ಬಳಿಕ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ತಲುಪುವರು.
ಕಾರ್ಯಕ್ರಮಗಳು:
- ಮೊದಲು ಗೋರಕ್ಷಕನಾಥರು ತಪಸ್ಸು ಮಾಡಿದ ಜ್ವಾಲಾಪೀಠ ದರ್ಶನ.
- ನಂತರ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ.
- ಬೆಳಗ್ಗೆ 11 ಗಂಟೆಗೆ – ಶ್ರೀಗಿರಿ ತಪೋವನದಿಂದ 1.5 ಕಿ.ಮೀ. ದೂರದಲ್ಲಿರುವ ಶ್ರೀ ಗುರು ಭೈರವೈಕ್ಯ ಮಂದಿರದ ಉದ್ಘಾಟನೆ.
- ಬಳಿಕ BGS ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ – ಭಕ್ತರನ್ನು ಉದ್ದೇಶಿಸಿ ಭಾಷಣ.
- ಕಾರ್ಯಕ್ರಮ ಮುಗಿದ ಬಳಿಕ HAL ವಿಮಾನ ನಿಲ್ದಾಣಕ್ಕೆ ತೆರಳಿ ಕೇರಳಕ್ಕೆ ಪ್ರಯಾಣ.
ಆದಿಚುಂಚನಗಿರಿಯಲ್ಲಿ ಹಬ್ಬದ ಸಂಭ್ರಮ
ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದಾದ್ಯಂತ ಫ್ಲೆಕ್ಸ್ ಮತ್ತು ಕಟೌಟ್ಗಳು ರಾರಾಜಿಸುತ್ತಿವೆ. ಮಠದ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

ಭದ್ರತಾ ದೃಷ್ಟಿಯಿಂದ 2,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಸೀಮಿತ ನಿಯಮಗಳು ಜಾರಿಯಲ್ಲಿವೆ.
ನಾಳೆ ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧ
ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 8 ಕಿ.ಮೀ. ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಆದಿಚುಂಚನಗಿರಿ ಮಠದಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತ ಭದ್ರತೆ, ಸಾರಿಗೆ ಮತ್ತು ಇತರ ಸೌಲಭ್ಯಗಳ ಬಗ್ಗೆ ವಿಶೇಷ ತಯಾರಿ ನಡೆಸಿದೆ. ಭಕ್ತರು ಮತ್ತು ಸಾರ್ವಜನಿಕರು ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
