ಬೆಂಗಳೂರು: ರಾಜ್ಯದ ಜನತೆಗೆ ಹಾಲಿನ ದರ ಏರಿಕೆಯ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಂದಿನಿ ಹಾಲು ಹಾಗೂ ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ಪರಿಷ್ಕೃತ ದರಗಳು ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ.
ಹೊಸ ದರ ಪರಿಷ್ಕರಣೆಯ ಪರಿಣಾಮವಾಗಿ ನಂದಿನಿ ಮೊಸರಿನ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರಿನ ದರ 28 ರೂ.ನಿಂದ 34 ರೂ.ಗೆ ಹೆಚ್ಚಳವಾಗಿದ್ದು, ಗ್ರಾಹಕರು ಇನ್ನು ಮುಂದೆ 6 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಇದೇ ವೇಳೆ ಒಂದು ಲೀಟರ್ ಮೊಸರಿನ ಬೆಲೆ 54 ರೂ.ನಿಂದ 68 ರೂ.ಗೆ ಏರಿಕೆಯಾಗಿದೆ. ಅಂದರೆ, ಒಂದು ಲೀಟರ್ ಮೊಸರಿಗೆ 14 ರೂ. ಹೆಚ್ಚಳವಾಗಿದೆ.
ಹಾಲಿನ ವಿವಿಧ ಮಾದರಿಗಳ ದರವನ್ನೂ ಕೆಎಂಎಫ್ ಪರಿಷ್ಕರಿಸಿದೆ. ಟೋನ್ಡ್ ಹಾಲಿನ ಬೆಲೆ 46 ರೂ.ನಿಂದ 54 ರೂ.ಗೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ 47 ರೂ.ನಿಂದ 56 ರೂ.ಗೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಹಸುವಿನ ಹಾಲಿನ ಬೆಲೆ 50 ರೂ.ನಿಂದ 58 ರೂ.ಗೆ ಏರಿಕೆಯಾಗಿದೆ.
ಇನ್ನು ಸ್ಪೆಷಲ್ ಟೋನ್ಡ್ ಹಾಲು ಹಾಗೂ ಶುಭಂ ಹಾಲಿನ ದರ ತಲಾ 52 ರೂ.ನಿಂದ 64 ರೂ.ಗೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ಬೆಲೆ 53 ರೂ.ನಿಂದ 65 ರೂ.ಗೆ ಏರಿಕೆಯಾಗಿದೆ. ಹೀಗಾಗಿ ನವೆಂಬರ್ 1ರಿಂದ ನಂದಿನಿ ಹಾಲು ಹಾಗೂ ಮೊಸರು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗಲಿದೆ.
ಕೆಎಂಎಫ್ ಪ್ರಕಾರ, ಕರ್ನಾಟಕ ಹಾಲು ಮಹಾಮಂಡಳಿ ಕಳೆದ ಐದು ದಶಕಗಳಿಂದ ‘ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ’ ಎಂಬ ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಅವರಲ್ಲಿ ಸುಮಾರು 8.9 ಲಕ್ಷ ರೈತರು ಪ್ರತಿದಿನ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂ. ಪಾವತಿಸಲಾಗುತ್ತಿದೆ.
ಈ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾಗದ ಕಾರಣ ಹಲವು ಭಾಗಗಳಲ್ಲಿ ನೀರು ಮತ್ತು ಮೇವು ಕೊರತೆ ಎದುರಾಗಿದೆ. ಇದರಿಂದ ಪಶುಗಳ ನಿರ್ವಹಣೆ, ಔಷಧೋಪಚಾರ ಹಾಗೂ ಮೇವು ಖರೀದಿಗೆ ರೈತರು ಹೆಚ್ಚಿನ ಹಣ ಖರ್ಚು ಮಾಡಬೇಕಾಗಿದೆ. ಹೈನುಗಾರಿಕೆಯನ್ನು ಮುಂದುವರಿಸುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಹಾಲು ಖರೀದಿ ದರವನ್ನು ಪ್ರತಿ ಲೀಟರ್ಗೆ ಕನಿಷ್ಠ 10ರಿಂದ 12 ರೂ. ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಹೈನುಗಾರ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಅದರಂತೆ ನಂದಿನಿ ಟೋನ್ಡ್ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ಗೆ 8 ರೂ. ಹೆಚ್ಚಿಸಲು ಹಾಗೂ ಪರಿಷ್ಕೃತ ಮೊತ್ತದಲ್ಲಿ 7 ರೂ.ಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಲಾಗಿದೆ.
ಇದರೊಂದಿಗೆ ಹಾಲಿನಲ್ಲಿರುವ ಜಿಡ್ಡಿನಾಂಶದ (ಫ್ಯಾಟ್) ಪ್ರಮಾಣವನ್ನು ಆಧರಿಸಿ ನಂದಿನಿಯ ಎಲ್ಲ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪರಿಷ್ಕರಿಸಲಾಗಿದೆ. ಈ ಹೊಸ ದರಗಳು ನವೆಂಬರ್ 1ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿವೆ.
