ಹಾಸನಾಂಬೆ ದರ್ಶನಕ್ಕೆ 2ನೇ ದಿನವೂ ಭಕ್ತಸಾಗರ; ಮಧ್ಯರಾತ್ರಿಯಿಂದಲೇ ಕ್ಯೂ!

ಆತ್ಮಹತ್ಯೆ! (2)

ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ಜಾತ್ರೆಯ ಸಾರ್ವಜನಿಕ ದರ್ಶನಕ್ಕೆ ಎರಡನೇ ದಿನವೂ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದು, ದೇವಾಲಯದ ಸುತ್ತಮುತ್ತ ಭಕ್ತರಿಂದ ತುಂಬಿ ತುಳುಕುತ್ತಿದೆ.

ಎರಡನೇ ದಿನದ ದರ್ಶನಕ್ಕಾಗಿ ಮಧ್ಯರಾತ್ರಿಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. ಬೆಳಗಿನ ಜಾವದಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ದೇವಾಲಯದ ಆವರಣ ಹಾಗೂ ದರ್ಶನದ ಸರತಿ ಸಾಲುಗಳಲ್ಲಿ ಭಾರೀ ಜನಜಂಗುಳಿ ಕಂಡುಬಂದಿದೆ. ಸಾಮಾನ್ಯ ದರ್ಶನದ ಜೊತೆಗೆ 300 ರೂಪಾಯಿ ವಿಶೇಷ ದರ್ಶನದ ಸಾಲಿನಲ್ಲಿಯೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಿಂತಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನ ಆರಂಭವಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ಶಿಸ್ತಿನಿಂದ ಸಾಗುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಇನ್ನು 1000 ರೂಪಾಯಿ ವಿಶೇಷ ದರ್ಶನದ ಸಾಲಿನಲ್ಲಿ ಸದ್ಯ ಹೆಚ್ಚಿನ ಸಂಖ್ಯೆಯ ಭಕ್ತರು ಕಂಡುಬಂದಿಲ್ಲ. ಹೀಗಾಗಿ ಈ ಸಾಲಿನಲ್ಲಿ ಹೆಚ್ಚಿನ ದಟ್ಟಣೆ ಇಲ್ಲದೆ ಭಕ್ತರು ಸುಗಮವಾಗಿ ದರ್ಶನ ಪಡೆಯುವಂತಾಗಿದೆ. ಮತ್ತೊಂದೆಡೆ, 300 ರೂಪಾಯಿ ವಿಶೇಷ ದರ್ಶನದ ಸಾಲಿನಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದಾರೆ.

ಭಕ್ತರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿಶೇಷ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಬೆಳಗ್ಗೆಯೇ ದೇವಾಲಯಕ್ಕೆ ಆಗಮಿಸಿದ ಎಸ್‌ಪಿ ಶುಭನ್ವಿತಾ ಅವರು ಸ್ಥಳದಲ್ಲೇ ಪರಿಶೀಲನೆ ನಡೆಸಿದರು. ಗರ್ಭಗುಡಿ ಸಮೀಪ ನಿಂತು ಭಕ್ತರ ಸರತಿ ಸಾಲು ಹಾಗೂ ಜನದಟ್ಟಣೆಯನ್ನು ಗಮನಿಸಿ, ಅಗತ್ಯ ಸೂಚನೆಗಳನ್ನು ನೀಡುತ್ತಾ ಜನರನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಹಾಸನಾಂಬ ಜಾತ್ರೆಯ ಮೊದಲ ದಿನವೂ ನಿರೀಕ್ಷೆಗೂ ಮೀರಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೊದಲ ದಿನ ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು, ದೇವಾಲಯದ ಸುತ್ತಮುತ್ತ ಭಕ್ತಸಾಗರವೇ ನಿರ್ಮಾಣವಾಗಿತ್ತು. ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು.

ಮೊದಲ ದಿನದ ಭಕ್ತರ ದಟ್ಟಣೆಯನ್ನು ಕಂಡ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಪ್ರತಿಕ್ರಿಯಿಸಿ, ಇದು ಹಾಸನಾಂಬ ದೇವಿಯ ಪವಾಡ ಎಂದು ಹೇಳಿದ್ದರು. ಪ್ರತಿವರ್ಷ ಹಾಸನಾಂಬ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಾರಿ ಆರಂಭದ ದಿನವೇ ಭಕ್ತರ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ.

ಹಾಸನಾಂಬ ದೇವಿಯ ದರ್ಶನಕ್ಕೆ ನಿಗದಿತ ಅವಧಿಯಲ್ಲಿ ಮಾತ್ರ ಅವಕಾಶ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಸನದತ್ತ ಆಗಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

Exit mobile version