ಚಿಕ್ಕಬಳ್ಳಾಪುರ: ಫೆಬ್ರವರಿ 14ರಂದು ಆಚರಿಸಲಾಗುವ ಪ್ರೇಮಿಗಳ ದಿನದಂದು ವಿಶ್ವವಿಖ್ಯಾತ ಪ್ರವಾಸಿ ತಾಣವಾದ ನಂದಿಗಿರಿಧಾಮಕ್ಕೆ ಪ್ರವೇಶ ನಿರ್ಬಂಧ ವಿಧಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಕ್ರಮ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಪ್ರೇಮಿಗಳ ದಿನದಂದು ನಂದಿಗಿರಿಧಾಮಕ್ಕೆ ಸಂಪೂರ್ಣ ಪ್ರವೇಶ ನಿಷೇಧಿಸಲಾಗಿದ್ದು, ಇದರಿಂದಾಗಿ ಪ್ರೇಮಿಗಳು ಹಾಗೂ ಪ್ರವಾಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರೇಮಿಗಳ ದಿನದಂದು ನಂದಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು, ಜೋಡಿಗಳು ಹಾಗೂ ಪ್ರವಾಸಿಗರು ಆಗಮಿಸುವ ಹಿನ್ನೆಲೆ ಇದೆ. ಆದರೆ, ಕಳೆದ ಕೆಲ ವರ್ಷಗಳಲ್ಲಿ ಕೆಲವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಗಳನ್ನು ಉಲ್ಲೇಖಿಸಿ, ಮುಂಜಾಗ್ರತಾ ಕ್ರಮವಾಗಿ ಈ ಬಾರಿ ನಂದಿಗಿರಿಧಾಮ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲಾಡಳಿತ ಹೊರಡಿಸಿರುವ ಆದೇಶದಂತೆ, ಫೆಬ್ರವರಿ 14ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಂದಿಗಿರಿಧಾಮಕ್ಕೆ ಯಾವುದೇ ಪ್ರವಾಸಿಗರು ಪ್ರವೇಶಿಸುವಂತಿಲ್ಲ. ಈ ಅವಧಿಯಲ್ಲಿ ಖಾಸಗಿ ವಾಹನಗಳು, ಪ್ರವಾಸಿ ವಾಹನಗಳು ಸೇರಿದಂತೆ ಯಾವುದೇ ವಾಹನಗಳಿಗೆ ನಂದಿಬೆಟ್ಟದತ್ತ ಹೋಗಲು ಅವಕಾಶ ಇರುವುದಿಲ್ಲ. ಅಲ್ಲದೆ, ಸಾರ್ವಜನಿಕರು, ಜೋಡಿಗಳು ಮಾತ್ರವಲ್ಲದೆ ಸಾಮಾನ್ಯ ಪ್ರವಾಸಿಗರಿಗೂ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಆದರೆ, ಜಿಲ್ಲಾಡಳಿತದ ಈ ಕ್ರಮಕ್ಕೆ ಪ್ರೇಮಿಗಳು ಹಾಗೂ ಯುವಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾಯೋರು ಎಲ್ಲಿದ್ದರೂ ಸಾಯುತ್ತಾರೆ. ಅದಕ್ಕಾಗಿ ಎಲ್ಲರಿಗೂ ನಿರ್ಬಂಧ ಏಕೆ?” ಎಂದು ಪ್ರಶ್ನಿಸುತ್ತಿರುವ ಪ್ರೇಮಿಗಳು, ಇದು ಅನಗತ್ಯ ಹಾಗೂ ಅತಿರೇಕದ ಕ್ರಮ ಎಂದು ಆಕ್ರೋಶ ಹೊರಹಾಕಿದ್ದಾರೆ. ನಂದಿಗಿರಿಧಾಮವು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ತಾಣ. ಒಂದು ದಿನದ ನೆಪದಲ್ಲಿ ಸಂಪೂರ್ಣ ಬಂದ್ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ಜಿಲ್ಲಾಡಳಿತ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಪ್ರೇಮಿಗಳ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಆಗಮಿಸುವ ಕಾರಣ, ಭದ್ರತಾ ದೃಷ್ಟಿಯಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ನಂದಿಬೆಟ್ಟದಂತಹ ಎತ್ತರದ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ನಿಯಂತ್ರಣ ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆ ಜನರ ಜೀವ ರಕ್ಷಣೆಯೇ ಮೊದಲ ಆದ್ಯತೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ಹೇಳಿವೆ.
