ಮೆಟ್ರೋ ಪ್ರಯಾಣಿಕರೇ ಎಚ್ಚರ! ಈ ಹೊಸ ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಫಿಕ್ಸ್‌

Untitled design 2026 02 02T152812.365

ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋ ನಗರದ ಶಿಸ್ತಿನ ಸಂಕೇತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರಿಂದ ಸತತವಾಗಿ ಮೆಟ್ರೋ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಈಗ ಮೆಟ್ರೋ ಶಿಷ್ಟಾಚಾರ (Metro Etiquette) ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.

ಲಕ್ಷ ದಾಟಿದ ಉಲ್ಲಂಘನೆ ಪ್ರಕರಣಗಳು

ಕಳೆದ ಒಂದು ವರ್ಷದ ಅಂಕಿಅಂಶಗಳನ್ನು ಗಮನಿಸಿದರೆ ಬೆಚ್ಚಿಬೀಳುವಂತಿದೆ. ಸುಮಾರು 1 ಲಕ್ಷಕ್ಕೂ ಅಧಿಕ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಮೆಟ್ರೋ ಆವರಣದಲ್ಲಿ ಫೋಟೋಶೂಟ್ ಮಾಡುವುದು, ರೈಲಿನೊಳಗೆ ಕುಳಿತು ಆಹಾರ ಸೇವಿಸುವುದು ಮತ್ತು ಸಹ-ಪ್ರಯಾಣಿಕರಿಗೆ ತೊಂದರೆ ಕೊಡುವಂತಹ ಘಟನೆಗಳು ಮಿತಿಮೀರುತ್ತಿವೆ. ಇದನ್ನು ತಡೆಗಟ್ಟಲು ಬಿಎಂಆರ್‌ಸಿಎಲ್ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.

ರೈಲಿನೊಳಗೆ ಹೋಮ್ ಗಾರ್ಡ್‌ಗಳ ಕಣ್ಗಾವಲು

ಇನ್ನು ಮುಂದೆ ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಇಬ್ಬರು ಹೋಮ್ ಗಾರ್ಡ್‌ಗಳು ರೈಲಿನೊಳಗೆ ಗಸ್ತು ತಿರುಗುವುದನ್ನು ಕಾಣಬಹುದು. ಇವರ ಮುಖ್ಯ ಕೆಲಸವೆಂದರೆ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚುವುದು ಮತ್ತು ಅವರಿಗೆ ಸ್ಥಳದಲ್ಲೇ ಎಚ್ಚರಿಕೆ ನೀಡುವುದು. ಒಂದು ವೇಳೆ ಪ್ರಯಾಣಿಕರು ಪದೇ ಪದೇ ಎಚ್ಚರಿಸಿದರೂ ನಿಯಮ ಮೀರಿದರೆ, ಮೆಟ್ರೋ ರೈಲ್ವೆ ಕಾಯ್ದೆ 2002 ರ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.

ಯಾವ ತಪ್ಪುಗಳಿಗೆ ಎಷ್ಟಿದೆ ದಂಡ ?

ಸಾರ್ವಜನಿಕ ಆಸ್ತಿಯನ್ನು ಗೌರವಿಸುವುದು ಮತ್ತು ಸಹ-ಪ್ರಯಾಣಿಕರ ಖಾಸಗಿತನವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ನಿಯಮ ಉಲ್ಲಂಘಿಸುವವರಿಗೆ ಬಿಎಂಆರ್‌ಸಿಎಲ್ ಈ ಕೆಳಗಿನಂತೆ ದಂಡ ನಿಗದಿಪಡಿಸಿದೆ:

ಉಲ್ಲಂಘನೆಯ ಪ್ರಕಾರ ದಂಡದ ಮೊತ್ತ (ರೂ.ಗಳಲ್ಲಿ)
ಮದ್ಯಪಾನ ಮಾಡಿ ಮೆಟ್ರೋ ಪ್ರವೇಶಿಸುವುದು 500 ರೂ.
ಮೆಟ್ರೋ ರೈಲಿನ ಹಳಿ ಮೇಲೆ ಇಳಿಯುವುದು 1,000 ರೂ.
ಅನುಮತಿ ಇಲ್ಲದೆ ವಿಡಿಯೋ / ಫೋಟೋ ಶೂಟಿಂಗ್ 500 ರೂ.
ರೈಲಿನೊಳಗೆ ಆಹಾರ ಸೇವನೆ 250 ರೂ.
ಸಾರ್ವಜನಿಕವಾಗಿ ಅಶ್ಲೀಲ ವರ್ತನೆ 250 ರೂ.
ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು 50 ರೂ. (ಜೊತೆಗೆ ಪ್ರಯಾಣ ದರ)
ಸಹಾಯವಾಣಿ ಸಂಖ್ಯೆಗಳು

ಪ್ರಯಾಣದ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆಯಾದರೆ ಅಥವಾ ಇತರರು ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದರೆ ತಕ್ಷಣ ದೂರು ನೀಡಬಹುದು.

ನಮ್ಮ ಮೆಟ್ರೋ ನಮ್ಮ ಹೆಮ್ಮೆ, ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಸೀಟು ಬಿಟ್ಟುಕೊಡುವುದು, ಮೊಬೈಲ್‌ನಲ್ಲಿ ಜೋರಾಗಿ ಮಾತನಾಡದೆ ಇರುವುದು ಮತ್ತು ಸ್ವಚ್ಛತೆ ಕಾಪಾಡುವುದರ ಬಗ್ಗೆ ಈ ಅಭಿಯಾನ ಹೆಚ್ಚಿನ ಒತ್ತು ನೀಡಿದೆ.

 

Exit mobile version