ಸ್ಥಗಿತಗೊಂಡಿದ್ದ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಪುನರಾರಂಭ

Web Photo Editor (30)

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರ ಆತಂಕಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ಉಂಟಾಗಿದ್ದ ತಾಂತ್ರಿಕ ದೋಷದಿಂದ ಮಂಗಳವಾರ ಸಂಜೆ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋದ ನೇರಳೆ ಮಾರ್ಗ ಸಂಚಾರವು ಇಂದು(ಜೂನ್24)ಮುಂಜಾನೆಯಿಂದಲೇ ಸಂಪೂರ್ಣವಾಗಿ ಪುನರಾರಂಭಗೊಂಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಾಂತ್ರಿಕ ತಂಡಗಳು ಇಡೀ ರಾತ್ರಿ ನಿರಂತರವಾಗಿ ದುರಸ್ತಿ ಕಾರ್ಯ ನಡೆಸಿ, ಮುಂಜಾನೆ 3:30ರ ವೇಳೆಗೆ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಿವೆ. ಇದರ ಪರಿಣಾಮವಾಗಿ ನಿಗದಿತ ವೇಳಾಪಟ್ಟಿಯಂತೆ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸೇವೆಗಳು ಪುನರಾರಂಭಗೊಂಡಿದ್ದು, ಪ್ರಯಾಣಿಕರು ನಿರಾಳರಾಗಿದ್ದಾರೆ.

ಏನಾಗಿತ್ತು?

ಮಂಗಳವಾರ ಸಂಜೆ ಸುಮಾರು 6:30ರ ವೇಳೆಗೆ, ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಮೆಟ್ರೋದ ‘ಥರ್ಡ್ ರೈಲ್ ಸಿಸ್ಟಮ್’ನ ಕರೆಂಟ್ ಕಲೆಕ್ಟರ್ ಶೂನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ದೋಷದಿಂದ ಮೆಜೆಸ್ಟಿಕ್ ಮತ್ತು ಎಂ.ಜಿ. ರಸ್ತೆ ನಡುವಿನ ಪ್ರಮುಖ ಸಂಪರ್ಕ ವ್ಯತ್ಯಯಗೊಂಡು, ನೇರಳೆ ಮಾರ್ಗದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ರೈಲಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಸುಮಾರು ಅರ್ಧ ಗಂಟೆಯ ನಂತರ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ದುರಸ್ತಿ ಕಾರ್ಯ ರಾತ್ರಿ ತಡರವರೆಗೂ ಮುಂದುವರಿದ ಕಾರಣ ಸಾವಿರಾರು ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಅವಲಂಬಿಸಬೇಕಾಯಿತು. 

ಮೊದಲ ರೈಲು ಯಶಸ್ವಿ ಸಂಚಾರ

ತಾಂತ್ರಿಕ ದೋಷವನ್ನು ಸಂಪೂರ್ಣವಾಗಿ ಸರಿಪಡಿಸಿದ ಬಳಿಕ, ಬೆಳಗ್ಗೆ 5 ಗಂಟೆಗೆ ನಿಗದಿತ ವೇಳಾಪಟ್ಟಿಯಂತೆ ಮೆಟ್ರೋ ಸೇವೆಗಳು ಆರಂಭಗೊಂಡವು. ಬೆಳಗ್ಗೆ 5:21ಕ್ಕೆ ಕಾಡುಗೋಡಿ (ವೈಟ್‌ಫೀಲ್ಡ್)ಯಿಂದ ಹೊರಟ ಮೊದಲ ಮೆಟ್ರೋ ರೈಲು ಕಬ್ಬನ್ ಪಾರ್ಕ್ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿತು. ಪ್ರಸ್ತುತ ಕಾಡುಗೋಡಿಯಿಂದ ಚಲ್ಲಘಟ್ಟದವರೆಗಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಯಾವುದೇ ಅಡಚಣೆ ಇಲ್ಲದೆ ಮೆಟ್ರೋ ಸಂಚಾರ ನಡೆಯುತ್ತಿದ್ದು, ಕಚೇರಿಗಳಿಗೆ ಹಾಗೂ ದೈನಂದಿನ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಸುಗಮವಾಗಿ ಪ್ರಯಾಣಿಸುತ್ತಿದ್ದಾರೆ.

ಬೆಳಿಗ್ಗೆ ಕಬ್ಬನ್ ಪಾರ್ಕ್ ಗೆ ಆಗಮಿಸಿದ ಮೊದಲ ರೈಲು
ರಾತ್ರಿಯಿಡೀ ಸತತ ಪ್ರಯತ್ನದ ಬಳಿಕ ಬೆಳಗ್ಗೆ 3:30ಕ್ಕೆ ದೋಷ ಸಂಪೂರ್ಣವಾಗಿ ನಿವಾರಣೆಯಾಯಿತು. ತಕ್ಷಣವೇ ಬೆಳಗ್ಗೆ 5 ಗಂಟೆಗೆ ವಾಡಿಕೆಯಂತೆ ರೈಲು ಸೇವೆ ಆರಂಭವಾಯಿತು. ಬೆಳಗ್ಗೆ 5:21ಕ್ಕೆ ಕಾಡುಗೋಡಿಯಿಂದ (ವೈಟ್ಫೀಲ್ಡ್) ಹೊರಟ ಮೊದಲ ರೈಲು ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಸುಗಮವಾಗಿ ತಲುಪಿತು. ಇದೀಗ ಕಾಡುಗೋಡಿಯಿಂದ ಚಲ್ಲಘಟ್ಟದವರೆಗಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಯಾವುದೇ ಅಡ್ಡಿಯಿಲ್ಲದೆ ಮೆಟ್ರೋ ಸಂಚಾರ ನಡೆಯುತ್ತಿದ್ದು, ಕಚೇರಿ ಮತ್ತು ದೈನಂದಿನ ವ್ಯವಹಾರಗಳಿಗೆ ತೆರಳುವ ಸಾರ್ವಜನಿಕರು ಅನುಕೂಲಕರವಾಗಿ ಪ್ರಯಾಣಿಸುತ್ತಿದ್ದಾರೆ.

Exit mobile version