ಮೆಟ್ರೋ ಪ್ರಯಾಣಿಕರೇ ಗಮನಿಸಿ: ಆ. 9 ರಂದು ಪರ್ಪಲ್ ಲೈನ್‌ನ ಈ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

Your paragraph text (41)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲೈಫ್‌ಲೈನ್ ಎಂದೇ ಖ್ಯಾತಿ ಪಡೆದಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಮುಂಬರುವ ಭಾನುವಾರ (ಆಗಸ್ಟ್ 9) ನೇರಳೆ ಮಾರ್ಗದಲ್ಲಿ (ಪರ್ಪಲ್ ಲೈನ್) ಪ್ರಯಾಣಿಸಲು ಯೋಜಿಸಿರುವವರು ತಮ್ಮ ವೇಳಾಪಟ್ಟಿಯನ್ನು ಸರಿಹೊಂದಿಸಿಕೊಳ್ಳಬೇಕಾಗುತ್ತದೆ. ಅಂದು ಬೆಳಿಗ್ಗೆ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದ್ದು, ಈ ಕುರಿತು ಬಿಎಂಆರ್ಸಿಎಲ್ ಮಾಹಿತಿ ಹಂಚಿಕೊಂಡಿದೆ.

2 ಗಂಟೆಗಳ ಕಾಲ ಸೇವೆ ಸ್ಥಗಿತ

ಭಾನುವಾರ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳ ನಡುವೆ ಮೆಟ್ರೋ ರೈಲುಗಳ ಸಂಚಾರ ಇರುವುದಿಲ್ಲ. ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ಮಧ್ಯೆ ತುರ್ತು ಹಳಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಎರಡು ಗಂಟೆಗಳ ಅವಧಿಗೆ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಲಾಗುತ್ತಿದೆ.

ಉಳಿದ ಮಾರ್ಗಗಳಲ್ಲಿ ಸಂಚಾರ ಯಥಾಸ್ಥಿತಿ

ಈ ಅವಧಿಯಲ್ಲಿ ಚಲ್ಲಘಟ್ಟದಿಂದ ಎಂ.ಜಿ. ರಸ್ತೆವರೆಗೆ ಹಾಗೂ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲುಗಳು ಓಡಾಡಲಿವೆ. ಹಾಗೆಯೇ ಹಸಿರು ಮಾರ್ಗದ ಮಾದಾವರದಿಂದ ರೇಷ್ಮೆ ಸಂಸ್ಥೆ (ಸಿಲ್ಕ್ ಇನ್‌ಸ್ಟಿಟ್ಯೂಟ್) ಮತ್ತು ಹಳದಿ ಮಾರ್ಗದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬೈಯಪ್ಪನಹಳ್ಳಿ-ಎಂ.ಜಿ. ರಸ್ತೆ ಲಿಂಕ್‌ನಲ್ಲಿ ಬೆಳಿಗ್ಗೆ 9:00 ಗಂಟೆಯ ನಂತರ ಇಡೀ ನೇರಳೆ ಮಾರ್ಗದಾದ್ಯಂತ ಸಂಚಾರ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಲಿದೆ.

ಹೀಗಾಗಿ ಭಾನುವಾರ ಮುಂಜಾನೆ ಪ್ರಯಾಣಿಸುವ ಸಾರ್ವಜನಿಕರು ಕೊನೆಯ ಕ್ಷಣದ ಗೊಂದಲ ಮತ್ತು ಅನಾನುಕೂಲತೆಯನ್ನು ತಪ್ಪಿಸಲು ಈ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕಾಗಿ ಬಿಎಂಆರ್ಸಿಎಲ್ ಪ್ರಯಾಣಿಕರನ್ನು ವಿನಂತಿಸಿದೆ.

ಪಿಂಕ್ ಲೈನ್‌ನ 4 ಪ್ರಮುಖ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ

ರಾಜಧಾನಿ ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಬಹುದಿನಗಳ ನಿರೀಕ್ಷೆಯಾಗಿರುವ ‘ನಮ್ಮ ಮೆಟ್ರೋ’ ಪಿಂಕ್ ಲೈನ್ ಮೊದಲ ಹಂತದ ಮಾರ್ಗ ಉದ್ಘಾಟನೆಗೆ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಪ್ರಯಾಣಿಕರಿಗೆ ಲಾಸ್ಟ್-ಮೈಲ್ ಕನೆಕ್ಟಿವಿಟಿ ಸುಲಭಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮಹತ್ವದ ಕ್ರಮ ಕೈಗೊಂಡಿದೆ. ಪ್ರಾಥಮಿಕವಾಗಿ 4 ಪ್ರಮುಖ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಈ ಪಾರ್ಕಿಂಗ್ ತಾಣಗಳ ನಿರ್ವಹಣೆಗಾಗಿ ಬಿಎಂಆರ್ಸಿಎಲ್ ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವನೆಗಾಗಿ ವಿನಂತಿಯನ್ನು (ಆರ್ಎಫ್ಪಿ) ಆಹ್ವಾನಿಸಿದೆ.

ಯಾವೆಲ್ಲಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ಲಭ್ಯ?

ದಕ್ಷಿಣ ಬೆಂಗಳೂರು ಭಾಗದ 7.5 ಕಿಲೋಮೀಟರ್ ಉದ್ದದ ಎತ್ತರಿಸಿದ (ಎಲಿವೇಟೆಡ್) ಮಾರ್ಗದಲ್ಲಿ ಬರುವ ಕೆಳಗಿನ ನಿಲ್ದಾಣಗಳಲ್ಲಿ ಒಟ್ಟು 575 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಯಾಣಿಕರಿಗೆ ಹೊರೆಯಾಗದಂತೆ ದರಗಳು

ಬಿಎಂಆರ್ಸಿಎಲ್ ಪ್ರಯಾಣಿಕರಿಗೆ ಹೊರೆಯಾಗದಂತೆ ಪಾರ್ಕಿಂಗ್ ದರಗಳನ್ನು ನಿಗದಿಪಡಿಸಿದೆ.

ಪಿಂಕ್ ಲೈನ್ ಉದ್ಘಾಟನೆಯ ನಂತರ ಈ ಪಾರ್ಕಿಂಗ್ ಸೌಲಭ್ಯಗಳು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿವೆ. ವಿಶೇಷವಾಗಿ ಸೈಕಲ್‌ಗಳಿಗೆ ಉಚಿತ ನಿಲುಗಡೆ ನೀಡಿರುವುದು ಪರಿಸರ ಸ್ನೇಹಿ ಪ್ರಯಾಣವನ್ನು ಪ್ರೋತ್ಸಾಹಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ದ್ವಿಚಕ್ರ ವಾಹನ ಬಳಸುವ ಪ್ರಯಾಣಿಕರು ತಮ್ಮ ವಾಹನವನ್ನು ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷಿತವಾಗಿ ನಿಲ್ಲಿಸಿ, ಮೆಟ್ರೋ ಮೂಲಕ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು.

Exit mobile version