ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿರುವ ಜನರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಬಹುಕಾಲದಿಂದ ಕಾಯುತ್ತಿದ್ದ ‘ಪಿಂಕ್ ಲೈನ್’ ಮೆಟ್ರೋದ ಮೊದಲ ಹಂತವು ಇದೇ ಮೇ 2026ರಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ಪಿಂಕ್ ಲೈನ್‌ನ ಸುರಕ್ಷತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪರೀಕ್ಷಿಸಲು ಬಿಎಂಆರ್‌ಸಿಎಲ್ ಸಕಲ ಸಿದ್ಧತೆ ನಡೆಸಿದೆ. ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ (RDSO) ಏಪ್ರಿಲ್ ಮೊದಲ ವಾರದಲ್ಲಿ ಅಧಿಕೃತ ತಪಾಸಣೆ ಆರಂಭಿಸಲಿದೆ. ಈ ವೇಳೆ ರೈಲಿನ ವೇಗ, ಲೋಡ್ ಟೆಸ್ಟ್, ಹಳಿಗಳ ಸ್ಥಿರತೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ.
RDSO ವರದಿ ನೀಡಿದ ಬಳಿಕ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಅಂತಿಮ ಹಂತದ ಪರಿಶೀಲನೆ ನಡೆಸಲಿದ್ದಾರೆ. ಅವರಿಂದ ಸಂಚಾರಕ್ಕೆ ಒಪ್ಪಿಗೆ ಸಿಕ್ಕ ಕೂಡಲೇ ಸಾರ್ವಜನಿಕ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ.
ಪಿಂಕ್ ಲೈನ್ ಒಟ್ಟು 21.26 ಕಿ.ಮೀ ಉದ್ದವಿದ್ದರೂ, ಮೊದಲ ಹಂತದಲ್ಲಿ 7.5 ಕಿ.ಮೀ ಉದ್ದದ ಎಲಿವೇಟೆಡ್ (ಮೇಲ್ಸೇತುವೆ) ಮಾರ್ಗ ಮಾತ್ರ ಉದ್ಘಾಟನೆಯಾಗಲಿದೆ. ಇದು ಕಾಳೇನ ಅಗ್ರಹಾರ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್) ನಡುವೆ ಸಂಚರಿಸಲಿದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ, ಜಯದೇವ ಮತ್ತು ತಾವರೆಕೆರೆ ನಿಲ್ದಾಣಗಳಿವೆ.
ತಾವರೆಕೆರೆಯಿಂದ ನಾಗವಾರದವರೆಗಿನ ಉಳಿದ 13.8 ಕಿ.ಮೀ ಮಾರ್ಗವು ಭೂಗತ (Underground) ಮಾರ್ಗವಾಗಿದ್ದು, ಇದರ ಕಾಮಗಾರಿ ಪ್ರಗತಿಯಲ್ಲಿದೆ. ಈ ಸಂಪೂರ್ಣ ಮಾರ್ಗವು ಡಿಸೆಂಬರ್ 2026ರ ವೇಳೆಗೆ ಪೂರ್ಣಗೊಂಡು ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
ಜಯದೇವ ಜಂಕ್ಷನ್‌ನಲ್ಲಿ ಈ ಲೈನ್ ‘ಯೆಲ್ಲೋ ಲೈನ್’ (ಹಳದಿ ಮಾರ್ಗ) ಜೊತೆ ಸಂಪರ್ಕ ಹೊಂದುವುದರಿಂದ, ಎಲೆಕ್ಟ್ರಾನಿಕ್ ಸಿಟಿ ಮತ್ತು ಬನ್ನೇರುಘಟ್ಟ ರಸ್ತೆಯ ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಇದು ಸಹಕಾರಿಯಾಗಲಿದೆ
