ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬದ ಸಂಭ್ರಮಕ್ಕೆ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು, ಅರಮನೆಯ ರಾಜವೈಭವ ಹಾಗೂ ಆನೆಗಳ ಭವ್ಯ ಅಲಂಕಾರ ಮತ್ತಷ್ಟು ಮೆರುಗು ನೀಡಿವೆ. ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ದರ್ಶನ ಪಡೆಯಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.
ಚಾಮುಂಡಿ ಬೆಟ್ಟದಿಂದ ಅರಮನೆಗೆ ಆಗಮಿಸಿದ ಉತ್ಸವ ಮೂರ್ತಿ
ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ತೆರೆದ ವಿಶೇಷ ವಾಹನದಲ್ಲಿ ಮೆರವಣಿಗೆ ಆರಂಭಿಸಲಾಯಿತು. ಮಂಗಳವಾದ್ಯಗಳ ನಾದದೊಂದಿಗೆ ಸಾಗಿದ ಉತ್ಸವ ಮೂರ್ತಿ ಮೈಸೂರು ಅರಮನೆಯನ್ನು ತಲುಪಿತು. ಅರಮನೆಯ ಜಯಮಾರ್ತಾಂಡ ಮುಖ್ಯದ್ವಾರದ ಮೂಲಕ ಉತ್ಸವ ಮೂರ್ತಿಯನ್ನು ಒಳಗೆ ಕರೆತರಲಾಯಿತು.
ದಾರಿಯುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಭಕ್ತರು ತಾಯಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು. ಪೊಲೀಸ್ ಬಂದೋಬಸ್ತ್ನಲ್ಲಿ ಮೆರವಣಿಗೆ ಸುಸೂತ್ರವಾಗಿ ಸಾಗಿತು. ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ಉತ್ಸವ ಮೂರ್ತಿಯನ್ನು ಅರಮನೆಗೆ ಕರೆತರಲಾಯಿತು. ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿಯ ದರ್ಶನ ಭಕ್ತರ ಕಣ್ಮನ ಸೆಳೆಯಿತು.
ಚಿನ್ನದಂಬಾರಿ ಹೊರಲು ಕ್ಯಾಪ್ಟನ್ ಪ್ರಶಾಂತ ಸಜ್ಜು
ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿರುವ ಚಿನ್ನದಂಬಾರಿ ಹೊರಲು ಕ್ಯಾಪ್ಟನ್ ಪ್ರಶಾಂತ ಸಜ್ಜಾಗಿದ್ದಾನೆ. ಕಳೆದ 18 ವರ್ಷಗಳಿಂದ ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಪ್ರಶಾಂತನಿಗೆ ಈ ಬಾರಿ ಮೊದಲ ಬಾರಿಗೆ ಚಿನ್ನದಂಬಾರಿ ಹೊರುವ ಜವಾಬ್ದಾರಿ ನೀಡಲಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸಲಿರುವ ಆನೆಗಳಿಗೆ ವಿಶೇಷ ರೀತಿಯಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತಿದೆ. ಕಲಾವಿದ ನಾಗಲಿಂಗ ಸ್ವಾಮಿ ನೇತೃತ್ವದ ತಂಡ ಆನೆಗಳ ಅಲಂಕಾರ ಕಾರ್ಯದಲ್ಲಿ ತೊಡಗಿದೆ. ಸಾಂಪ್ರದಾಯಿಕ ವಿನ್ಯಾಸಗಳು ಹಾಗೂ ಆಕರ್ಷಕ ಚಿತ್ತಾರಗಳಿಂದ ಸಿಂಗಾರಗೊಳ್ಳುತ್ತಿರುವ ಗಜಪಡೆ ನಾಡಹಬ್ಬದ ವೈಭವವನ್ನು ಹೆಚ್ಚಿಸಿದೆ.
ಅರಮನೆಯಲ್ಲಿ ಯದುವೀರ್ ಒಡೆಯರ್ ವಿಜಯಯಾತ್ರೆ
ಜಂಬೂಸವಾರಿ ಸಂಭ್ರಮದ ನಡುವೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಸಾಂಪ್ರದಾಯಿಕ ಆಚರಣೆಗಳೂ ನಡೆಯಲಿವೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಟ್ಟದ ಕತ್ತಿಯೊಂದಿಗೆ ವಿಜಯಯಾತ್ರೆ ನಡೆಸಲಿದ್ದಾರೆ. ಅವರನ್ನು ಸ್ವಾಗತಿಸಲು ವಾದ್ಯತಂಡ ಸಿದ್ಧವಾಗಿದೆ. ಭುವನೇಶ್ವರಿ ದೇವಸ್ಥಾನದ ಬಳಿ ವಾದ್ಯತಂಡದ ಮೂಲಕ ಸ್ವಾಗತ ನೀಡಲಾಗುತ್ತದೆ.
ವಿಜಯಯಾತ್ರೆಯ ಬಳಿಕ ಯದುವೀರ್ ಒಡೆಯರ್ ಶಮಿ ಪೂಜೆ ನೆರವೇರಿಸಲಿದ್ದಾರೆ. ನಂತರ ವಾಣಿವಿಲಾಸ ದೇವರ ಕೋಣೆಯಲ್ಲಿ ಕಂಕಣ ವಿಸರ್ಜನೆ ಸೇರಿದಂತೆ ಸಾಂಪ್ರದಾಯಿಕ ವಿಧಿವಿಧಾನಗಳು ನಡೆಯಲಿವೆ.
ಅರಮನೆ ಅಂಗಳದಲ್ಲಿ ವಜ್ರಮುಷ್ಠಿ ಕಾಳಗ
ಮೈಸೂರು ದಸರಾ ಆಚರಣೆಯ ಮತ್ತೊಂದು ವಿಶೇಷ ಆಕರ್ಷಣೆ ವಜ್ರಮುಷ್ಠಿ ಕಾಳಗ. ಅರಮನೆ ಆವರಣದ ಕನ್ನಡಿ ತೊಟ್ಟಿಯಲ್ಲಿ ನಡೆಯುವ ಈ ಐತಿಹಾಸಿಕ ಸಮರ ಕಲೆಯನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಜಟ್ಟಿ ಸಮುದಾಯಕ್ಕೆ ಸೇರಿದ ಪೈಲ್ವಾನರು ಈ ಕಾಳಗದಲ್ಲಿ ಭಾಗವಹಿಸುತ್ತಾರೆ.
ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ಜಟ್ಟಿಗಳು ಎರಡು ಜೋಡಿಗಳಾಗಿ ಸೆಣಸಾಡುತ್ತಾರೆ. ಕೈಬೆರಳಿಗೆ ವಜ್ರಮುಷ್ಠಿ ಎಂಬ ವಿಶೇಷ ಆಯುಧವನ್ನು ಧರಿಸಿ ಎದುರಾಳಿಗಳೊಂದಿಗೆ ಹೋರಾಡುವುದು ಈ ಕಾಳಗದ ವೈಶಿಷ್ಟ್ಯ. ಸಾಂಪ್ರದಾಯಿಕ ನಿಯಮಗಳ ಪ್ರಕಾರ ಎದುರಾಳಿಯ ತಲೆಯಿಂದ ರಕ್ತ ಚಿಮ್ಮಿದ ಬಳಿಕ ಕಾಳಗ ಅಂತ್ಯಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
