ಮೈಸೂರು ದಸರಾ 2026: ಪಟ್ಟದ ಆನೆಯಾಗಿ ಶ್ರೀಕಂಠ, ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆ

ಪಶ್ಚಾತ್ತಾಪ (11)

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಅರಮನೆ ನಗರಿ ಸಜ್ಜಾಗುತ್ತಿದೆ. ನಾಡಹಬ್ಬದ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಹಾಗೂ ಜಂಬೂಸವಾರಿಗೆ ಸಂಬಂಧಿಸಿದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ರಾಜಮನೆತನದ ಸಂಪ್ರದಾಯದಂತೆ ಈ ಬಾರಿಯ ಪಟ್ಟದ ಆನೆ ಮತ್ತು ನಿಶಾನೆ ಆನೆಯ ಆಯ್ಕೆ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ‘ಶ್ರೀಕಂಠ’ ಆನೆಯನ್ನು ಪಟ್ಟದ ಆನೆಯಾಗಿ ಹಾಗೂ ‘ಏಕಲವ್ಯ’ ಆನೆಯನ್ನು ನಿಶಾನೆ ಆನೆಯಾಗಿ ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ. ವಿಶೇಷವೆಂದರೆ, ಶ್ರೀಕಂಠ ಸತತ ಎರಡನೇ ಬಾರಿಗೆ ಪಟ್ಟದ ಆನೆಯಾಗಿ ದಸರಾ ಮಹೋತ್ಸವದಲ್ಲಿ ಸೇವೆ ಸಲ್ಲಿಸಲಿದೆ. ಕಳೆದ ವರ್ಷದ ದಸರಾ ಜಂಬೂಸವಾರಿಯಲ್ಲೂ ಶ್ರೀಕಂಠ ಪಟ್ಟದ ಆನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿತ್ತು.

ಅಕ್ಟೋಬರ್ 11ರಿಂದ ದಸರಾ ಸಂಭ್ರಮ

2026ರ ಮೈಸೂರು ದಸರಾ ಮಹೋತ್ಸವವು ಅಕ್ಟೋಬರ್ 11ರಿಂದ 21ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಅಕ್ಟೋಬರ್ 21ರಂದು ವಿಶ್ವಪ್ರಸಿದ್ಧ ವಿಜಯದಶಮಿ ಮೆರವಣಿಗೆ ಹಾಗೂ ಜಂಬೂಸವಾರಿ ವೈಭವದಿಂದ ಜರುಗಲಿದೆ.

ಈ ಬಾರಿ ದಸರಾ ಮಹೋತ್ಸವವನ್ನು ಮತ್ತಷ್ಟು ಆಕರ್ಷಕಗೊಳಿಸಲು ರಾಜ್ಯ ಸರ್ಕಾರ ಹಲವು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ದಸರಾಗೆ ಆಹ್ವಾನಿಸಲು ಸರ್ಕಾರ ತೀರ್ಮಾನಿಸಿದೆ. ಪ್ರವಾಸಿಗರು ಮತ್ತು ಸಾರ್ವಜನಿಕರನ್ನು ಸೆಳೆಯಲು ಏರ್‌ ಶೋ, ಡ್ರೋನ್ ಶೋ, ವಿಂಟೇಜ್ ಕಾರ್ ರ‍್ಯಾಲಿ, ಚಿತ್ರಸಂತೆ ಹಾಗೂ ಫ್ಲೀ ಮಾರ್ಕೆಟ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗಿದೆ.

ಗಜಪಡೆಯಲ್ಲೇ ಶ್ರೀಕಂಠ ಬಲಿಷ್ಠ

ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆಯ ಆನೆಗಳ ತೂಕ ತಪಾಸಣೆಯನ್ನೂ ನಡೆಸಲಾಗಿದೆ. ಮೈಸೂರಿನ ಖಾಸಗಿ ವೇ-ಬ್ರಿಡ್ಜ್‌ನಲ್ಲಿ ನಡೆದ ತೂಕ ಪರೀಕ್ಷೆಯಲ್ಲಿ 57 ವರ್ಷದ ಶ್ರೀಕಂಠ 5,790 ಕೆ.ಜಿ. ತೂಕ ದಾಖಲಿಸುವ ಮೂಲಕ ಗಜಪಡೆಯಲ್ಲೇ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಮೊದಲ ಸ್ಥಾನ ಪಡೆದಿದೆ.

41 ವರ್ಷದ ಏಕಲವ್ಯ 5,600 ಕೆ.ಜಿ. ತೂಕದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಧನಂಜಯ 5,530 ಕೆ.ಜಿ. ಮತ್ತು ಮಹೇಂದ್ರ 5,490 ಕೆ.ಜಿ. ತೂಕದೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ. ಹೆಣ್ಣಾನೆಗಳ ಪೈಕಿ 54 ವರ್ಷದ ಲಕ್ಷ್ಮಿ 3,990 ಕೆ.ಜಿ. ತೂಕದೊಂದಿಗೆ ಎಂಟನೇ ಸ್ಥಾನ ಹಾಗೂ 46 ವರ್ಷದ ಕಾವೇರಿ 3,075 ಕೆ.ಜಿ. ತೂಕದೊಂದಿಗೆ ಒಂಬತ್ತನೇ ಸ್ಥಾನ ಪಡೆದಿದೆ.

ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ರಾಜ್ಯದ ಎಲ್ಲ ಜಿಲ್ಲೆಗಳ ಜಾನಪದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅರ್ಜಿಯೊಂದಿಗೆ ತಂಡದ ಉತ್ತಮ ಭಾವಚಿತ್ರ, ಸದಸ್ಯರ ವಿವರ, ಅಂಚೆ ವಿಳಾಸ ಹಾಗೂ ತಂಡದ ಮುಖ್ಯಸ್ಥರ ಮೊಬೈಲ್ ಮತ್ತು ದೂರವಾಣಿ ಸಂಖ್ಯೆಯನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಮನ್ವಯಾಧಿಕಾರಿಗಳು, ದಸರಾ ಮೆರವಣಿಗೆ ಮತ್ತು ಸ್ತಬ್ಧಚಿತ್ರ ಉಪಸಮಿತಿ ಹಾಗೂ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು–570005 ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.

 

Exit mobile version